ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ: ಶಾಸಕ ಸಾ.ರಾ.ಮಹೇಶ್
Update: 2022-08-26 22:08 IST
ಮೈಸೂರು,ಆ.26: ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್, 'ಈ ಬಾರಿ ಮೇಯರ್ ಹುದ್ದೆ ಜೆಡಿಎಸ್ ಗೆ ಸಿಗಲಿದೆ. ಸ್ಥಳೀಯ ಮಾಜಿ ಸಿಎಂ ನಡೆ ಬೇಸರ ತರಿಸಿದೆ. ಕಾಂಗ್ರೆಸ್ ಪಕ್ಷದವರ ಧೋರಣೆಯಿಂದ ಬೇಸತ್ತಿದ್ದೇವೆ. ಕಾಂಗ್ರೆಸ್ ಜೊತೆ ನಮಗೆ ಮೈತ್ರಿ ಬೇಡ ಅನಿಸಿದೆ. ಬಿಜೆಪಿ ಜೊತೆ ಸಖ್ಯ ಬೆಳೆಸುವ ಕುರಿತು ತೀರ್ಮಾನಿಸಿಲ್ಲ' ಎಂದರು.
ಮೈಸೂರು ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಸೆಪ್ಟಂಬರ್ 6ಕ್ಕೆ ಪಾಲಿಕೆ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಎಲೆಕ್ಷನ್ ನಡೆಯಲಿದೆ.