ನಿಷೇಧಾಜ್ಞೆಯಿಂದ ನಷ್ಟ: ಕೊಡಗಿನ ವ್ಯಾಪಾರಿಗಳ ಬೇಸರ

Update: 2022-08-26 18:32 GMT

ಮಡಿಕೇರಿ ಆ.26 : ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವಿನ ಕಲಹದ ಕಾರಣ ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ವ್ಯಾಪಾರಿಗಳು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಮಡಿಕೇರಿ ಸಂತೆಯನ್ನು ರದ್ದುಗೊಳಿಸಲಾಗಿದ್ದು, ವ್ಯಾಪಾರವಿಲ್ಲದೆ ಮಾರುಕಟ್ಟೆ ಆವರಣ ಬಿಕೋ ಎನ್ನುತ್ತಿತ್ತು. ಬೆರಳೆಣಿಕೆಯಷ್ಟು ಮಂದಿ ವ್ಯಾಪಾರಿಗಳು ವಾಹನಗಳಲ್ಲಿ ತರಕಾರಿ ಮಾರಾಟ ಮಾಡಿದರಾದರೂ ಗ್ರಾಹಕರ ಕೊರತೆ ಕಂಡು ಬಂತು.

'ನಿತ್ಯ ದುಡಿದು ತಿನ್ನುವವರಿಗೆ ಈ ನಿಷೇಧಾಜ್ಞೆಯಿಂದ ತೊಂದರೆಯಾಗಿದೆ. ಸಂತೆ ವ್ಯಾಪಾರವನ್ನೇ ನಂಬಿ ಬದುಕುತ್ತಿರುವವರಿಗೆ ದೊಡ್ಡ ನಷ್ಟವಾಗಿದೆ' ಎಂದು ಮಾರುಕಟ್ಟೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ರಝಾಕ್ ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳ ಕಚ್ಚಾಟದಿಂದ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಕಷ್ಟ ಅನುಭವಿಸಬೇಕಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳಿಗೆ ರಾಜಕಾರಣಿಗಳು ಅವಕಾಶ ನೀಡಬಾರದೆಂದು ಮನವಿ ಮಾಡಿದರು.

ಪ್ರವಾಸೋದ್ಯಮ ಕ್ಷೇತ್ರವನ್ನು ಅವಲಂಬಿಸಿರುವವರು ಕೂಡ ನಷ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಪ್ರವಾಸಿಗರ ಸುಳಿವಿಲ್ಲದಾಗಿದ್ದು, ವ್ಯಾಪಾರ ಕುಸಿದಿದೆ. ಪ್ರವಾಸಿಗರನ್ನೇ ನಂಬಿ ಸಾವಿರಾರು ಮಂದಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರಸ್ತುತ ಆತಂಕದ ವಾತಾವರಣವನ್ನು ಸೃಷ್ಟಿಸಿರುವುದರಿಂದ ಜಿಲ್ಲೆಯ ಬಗ್ಗೆ ಪ್ರವಾಸಿಗರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

► ಪೊಲೀಸ್ ನಿಗಾ

ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ವಹಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದ್ದು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News