ಶಿವಮೊಗ್ಗ | ಗಣಪತಿ ಮೆರವಣಿಗೆಯಲ್ಲಿ ಇತರ ಧರ್ಮೀಯರ ವಿರುದ್ಧ ಘೋಷಣೆ ಕೂಗಿದರೆ ಕೇಸ್ ದಾಖಲು: ಎಸ್ಪಿ ಲಕ್ಷ್ಮೀಪ್ರಸಾದ್

Update: 2022-08-27 07:20 GMT

ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಇತರ ಧರ್ಮೀಯರ ವಿರುದ್ಧ ಘೋಷಣೆ ಕೂಗಿದವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಬಿ.ಎಂ. ಲಕ್ಷ್ಮಿಪ್ರಸಾದ್ ಹೇಳಿದ್ದಾರೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣೇಶೋತ್ಸವ ಆಚರಣೆ ಮಾಡಲು ಯಾರಿಗೂ ಯಾವುದೇ ಭಯ ಭೀತಿ ಬೇಡ.  ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ನಡೆದ ಘಟನೆ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೆಕ್ಷನ್ 144 ಜಾರಿಯಾಗಿರುವ ಬಗ್ಗೆ ಯಾವುದೇ ಆತಂಕ ಬೇಡ. ನಿಷೇಧಾಜ್ಞೆ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಸೂಚನೆ ಇದೆ ಇಂತಹ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಒಂದೇ ಸ್ಥಳದಲ್ಲಿ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸುವ ವಿಚಾರಕ್ಕೆ ಯಾವುದೇ ಪೈಪೋಟಿ ಬೇಡ. ಪೊಲೀಸರ ಸಲಹೆ ಸೂಚನೆಗಳನ್ನು ಯುವಕರು ಪಾಲಿಸಬೇಕು. ಮುಖಂಡರ ನಡುವೆ ಗಲಾಟೆ ನಡೆಯಲ್ಲ, ಯುವಕರ ನಡುವೆ ಗಲಾಟೆ ನಡೆಯುತ್ತದೆ. ಎಂಬುದನ್ನು ಯುವಕರು ಗಮನಿಸಬೇಕು. ಹಿರಿಯರು, ಪೊಲೀಸರ ಸಲಹೆ ಪಾಲಿಸಬೇಕು ಎಂದರು.

ಕಿಡಿಗೇಡಿಗಳು ಇಂತಹ ಸಂದರ್ಭಗಳನ್ನು ಕಾಯುತ್ತಿರುತ್ತಾರೆ. ಗಲಭೆ ಸೃಷ್ಟಿಗೆ ಯತ್ನಿಸುತ್ತಾರೆ. ಹೀಗಾಗಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸಂಪೂರ್ಣ ವಿಡಿಯೋ ಗ್ರಾಫಿ ಮಾಡಲಾಗುವುದು. ಬೇರೆಯವರ ಭಾವನೆಗೆ ಧಕ್ಕೆ ಬರದಂತೆ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕು ಎಂದು ಹೇಳಿದರು.

ಸೆ. 9 ರಂದು ಶುಕ್ರವಾರ ನಡೆಯುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸಿಕೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರುಗಳೊಂದಿಗೆ ಈಗಾಗಲೇ ಜಿಲ್ಲೆಯ ವಿವಿಧಡೆ ಸಭೆ ನಡೆಸಿ ಚರ್ಚಿಸಿದ್ದೇವೆ. ಆಗಸ್ಟ್ 31 ರಂದು ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಹಾಗೂ ಸಿದ್ಧತೆ ಕೈಗೊಳ್ಳಲಾಗಿದೆ. ಹೆಚ್ಚಿನ ಸಿಸಿಟಿವಿಗಳನ್ನು ಅಳವಡಿಸುವಂತೆ ಹಾಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಿಸಿಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಲ್ಲಾ ಕಡೆ ವಿಡಿಯೋ ರೆಕಾರ್ಡ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ರಾಜ್ಯಸಮಿತಿ ವಿಶೇಷ ಆಹ್ವಾನಿತ ಜಿ. ಪದ್ಮನಾಭ್, ರಾಜ್ಯಸಮಿತಿ ನಿರ್ದೇಶಕ ಎನ್. ರವಿಕುಮಾರ್, ನಗರ ಕಾರ್ಯದರ್ಶಿಗಳಾದ ಕೆ.ಆರ್. ಸೋಮನಾಥ್,  ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News