'ಇಂಡೋ - ಚೀನಾ ಸೌಹಾರ್ದ ವೇದಿಕೆ' ಸಂವಾದದಲ್ಲಿ ಭಾಗವಹಿಸುವುದಿಲ್ಲ: ಸಿದ್ದರಾಮಯ್ಯ, ಎಚ್.ಸಿ ಮಹದೇವಪ್ಪ ಸ್ಪಷ್ಟನೆ

Update: 2022-08-27 08:36 GMT

ಬೆಂಗಳೂರು: 'ಇಂಡೋ - ಚೀನಾ ಸೌಹಾರ್ದ ವೇದಿಕೆ'  ಎಂಬ ಸಂಸ್ಥೆಯೊಂದು ಆಯೋಜಿಸಿರುವ "ಚೀನಾದ ಆಂತರಿಕ ವ್ಯವಹಾರದಲ್ಲಿ ಅಮೆರಿಕಾದ ಹಸ್ತಕ್ಷೇಪ" ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಅನುಮತಿ ಇಲ್ಲದೆ ಹೆಸರನ್ನು ಪ್ರಕಟಿಸಿದ್ದಾರೆ ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಚಿವ ಎಚ್.ಸಿ ಮಹದೇವಪ್ಪ (H. C. Mahadevappa) ಆರೋಪಿಸಿದ್ದಾರೆ. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಚೀನಾ ರಾಯಭಾರಿ ಸನ್ ವೀಡಾಂಗ್ , ರಾಜ್ಯ ಸಭೆ ಸಂಸದ ಎಲ್. ಹನುಮಂತಯ್ಯ ಸೇರಿ ಕೆಲವರ ಹೆಸರನ್ನು ಮುದ್ರಿಸಲಾಗಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'India-China Friendship Association ರವಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ದಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ' ಎಂದು ತಿಳಿಸಿದ್ದಾರೆ.

ಇನ್ನು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಅವರು ಟ್ವೀಟ್ ಮಾಡಿ, ಕರ್ನಾಟಕದಲ್ಲಿರುವ ಇಂಡೋ - ಚೀನಾ ಸೌಹಾರ್ದ ವೇದಿಕೆಯು ನಮ್ಮ ಗಮನಕ್ಕೆ ತಾರದೆ ನನ್ನೊಡನೆ ಚರ್ಚಿಸದೇ "ಚೀನಾದ ಆಂತರಿಕ ವ್ಯವಹಾರದಲ್ಲಿ ಅಮೆರಿಕಾದ ಹಸ್ತಕ್ಷೇಪ" ಎಂಬ ವಿಷಯದ ಕುರಿತು ಸಂವಾದ ನಡೆಸಲು ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದೆ. ಈ ಆಹ್ವಾನ ಪತ್ರಿಕೆಯನ್ನು ನೋಡಿದ ದಿನವೇ ಇದೊಂದು ಅಸಂಬದ್ಧ ಹಾಗೂ ನಮ್ಮ ರಾಷ್ಟ್ರೀಯ ಆಶಯಕ್ಕೆ ಪೂರಕವಲ್ಲದ ವಿಷಯ ಎಂದು ಅನ್ನಿಸಿದ್ದರಿಂದ  ಈ ಸಂವಾದದಲ್ಲಿ ಪಾಲ್ಗೊಳ್ಳಬಾರದು ಎಂದು ಈಗಾಗಲೇ ನಾನು ನಿರ್ಧರಿಸಿದ್ದೆ. ಆದರೆ  ಈ ಸಂಗತಿಯು ಇದೀಗ ಚರ್ಚಾ ವಿಷಯವಾಗಿ ಮುನ್ನಲೆಗೆ ಬಂದಿದ್ದು " ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ... ಲೈಂಗಿಕ ಕಿರುಕುಳ ಆರೋಪ: ಮುರುಘಾ ಶರಣರ ವಿರುದ್ಧ FIR

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News