ಚಿಕ್ಕಮಗಳೂರು: ಬಿಲ್ಕಿಸ್‍ಬಾನು ಪ್ರಕರಣದ ಆರೋಪಿಗಳ ಬಿಡುಗಡೆ ಖಂಡಿಸಿ ತೃತೀಯ ಲಿಂಗಿಗಳು, ಪ್ರಗತಿಪರರಿಂದ ಪ್ರತಿಭಟನೆ

Update: 2022-08-27 12:12 GMT

ಚಿಕ್ಕಮಗಳೂರು, ಆ.27: ಬಿಲ್ಕಿಸ್‍ಬಾನು  ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳನ್ನು ಗುಜರಾತ್ ಸರಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿರುವ ಘಟನೆ ಖಂಡಿಸಿ ತೃತೀಯ ಲಿಂಗಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಗುಜರಾತ್ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಲ್ಕಿಸ್ ಜೊತೆಗಿದೆ ಕರ್ನಾಟಕ, ಬಿಲ್ಕಿಸ್‍ಗೆ ನ್ಯಾಯ ನೀಡಿ ಎಂಬಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, 2002, ಮಾ.3ರಂದು ಗುಜರಾತಿನಲ್ಲಿ ಮುಸ್ಲಿಮರ ಮೇಲೆ ಉದ್ದೇಶಪೂರ್ವಕ ಹಿಂಸಾತ್ಮಕ ದಾಳಿ ನಡೆದಿದ್ದು, ಈ ವೇಳೆ 25 ಮಂದಿ ಕೋಮುವಾದಿಗಳ ಗುಂಪೊಂದು ಬಿಲ್ಕಿಸ್‍ಬಾನು   ಅವರ ಕುಟುಂಬದ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಬಿಲ್ಕಿಸ್‍ಬಾನು  ಅವರ 3 ವರ್ಷದ ಮಗಳೂ ಸೇರಿದಂತೆ ಆಕೆಯ 14 ಕುಟುಂಬಸ್ಥರನ್ನು ಹತ್ಯೆ ಮಾಡಿತ್ತು. ಈ ವೇಳೆ ಗರ್ಭೀಣಿಯಾಗಿದ್ದ ಬಿಲ್ಕಿಸ್ ಭಾನು ಅವರ ಮೇಲೆ 11ಮಂದಿ ಕಾಮುಕರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆಕೆ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡ ಕಾಮುಕರು ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಇದರಿಂದ ಆಕೆಯ ಪ್ರಾಣ ಉಳಿದಿದ್ದು, ಬಳಿಕ ಈ ಘಟನೆ ಸಂಬಂಧ ತನಿಖೆ ನಡೆದು, ಈ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯದ 11 ಮಂದಿ ಆರೋಪಿಗಳನ್ನು ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. 2007ರಲ್ಲಿ ಮುಂಬೈನ ಕ್ರಿಮಿನಲ್ ನ್ಯಾಯಾಲಯವೂ ಈ ತೀರ್ಪನ್ನು ಎತ್ತಿಹಿಡಿದಿದ್ದು, ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿತ್ತು.

ಆದರೆ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಗುಜರಾತ್ ಸರಕಾರ ಸನ್ನಡತೆ ಆಧಾರದ ಮೇಲೆ ಬಿಲ್ಕಿಸ್ ಭಾನು ಪ್ರಕರಣದ ಎಲ್ಲ 11 ಆರೋಪಿಗಳನ್ನು ಬಿಡುಗಡೆ ಮಾಡುವ ಮೂಲಕ ಗುಜರಾತ್‍ನ ಬಿಜೆಪಿ ಸರಕಾರ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿರುವುದಲ್ಲದೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆಗೆ ನ್ಯಾಯಾಲಯ ನೀಡಿದ್ದ ನ್ಯಾಯವನ್ನೂ ಕಿತ್ತುಕೊಂಡಿದೆ. ಬಿಡುಗಡೆಯಾದ 11 ಆರೋಪಿಗಳಿಗೆ ಹಿಂದೂಪರ ಸಂಘಟನೆಗಳ ಮುಖಂಡರು ಹಾರ ಹಾಕಿ ಸ್ವಾಗತಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಆರೋಪಿಗಳು ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಸಂತ್ರಸ್ಥೆ ಮುಸ್ಲಿಮ್ ಎಂಬ ತಾರತಮ್ಯ ಮಾಡುವ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಬರುವಂತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿಯಲ್ಲಿ ಮಂಗಳಮುಖಿಯರಾದ ಸ್ವಾತಿಮಲ್ನಾಡ್, ಸ್ಪೂರ್ತಿ, ಸ್ವಾತಿಮಾ ಸೇರಿದಂತೆ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಗೌಸ್‍ಮುನೀರ್, ದಸಂಸ ಮುಖಂಡರಾದ ಕಬ್ಬಿಗೆರೆ ಮೋಹನ್, ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹಸನಬ್ಬ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News