ಬಿಲ್ಕೀಸ್ ಬಾನು ಪ್ರಕರಣದ ಆರೋಪಿಗಳ ಬಿಡುಗಡೆ 2 ದಶಕಗಳ ಗಾಯವನ್ನು ಹಸಿಯಾಗಿಸಿದೆ: ನಟ ಪ್ರಕಾಶ್ ರಾಜ್

Update: 2022-08-27 12:31 GMT

ಮೈಸೂರು,ಆ.27:  'ಬಿಲ್ಕೀಸ್ ಬಾನು ಅತ್ಯಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವುದು ಗುಜರಾತ್ ಸರ್ಕಾರದ ನಿರ್ಲಜ್ಜ ಕ್ರಮವಾಗಿದ್ದು, ಎರಡು ದಶಕಗಳ ಗಾಯವನ್ನು ಇನ್ನೂ ಹಸಿಯಾಗಿಸಿದೆ' ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.

ನಗರದ ಪುರಭವನದ  ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿ ಎದುರು ಶನಿವಾರ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವಿವಿಧ ಸಂಘಟನೆಗಳ ಜತೆಗೂಡಿ ಬಿಲ್ಕೀಸ್ ಬಾನು ಅತ್ಯಾಚಾರಿಗಳ ಅವಧಿಪೂರ್ಣ ಬಿಡುಗಡೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗುಜರಾತ್ ಗಲಭೆಯಲ್ಲಿ ದಾಳಿಕೋರರಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದ ಕುಟುಂಬವನ್ನು ಅಡ್ಡಗಟ್ಟಿ ಮೂರು ವರ್ಷದ ಹಸುಳೆ ಸೇರಿದಂತೆ 12 ಜನರನ್ನು ಕೊಂದು ಬಿಲ್ಕೀಸ್ ಬಾನು ಅವರ ಮೇಲೆ 11 ಜನರು  ಅತ್ಯಾಚಾರವೆಸಗಿದ್ದು ಸನ್ನಡತೆಯೇ? ಅಥವಾ ಬಿಡುಗಡೆಯಾದ ನಂತರ ಇವರಿಗೆ ಹಾರ ಹಾಕಿ ಸ್ವಾಗತಿಸದ ಕ್ರಮ ಸನ್ನಡತೆಯೇ? ಇದು ನನ್ನ ದೇಶ ಎಂದು ಪ್ರಕಾಶ್ ರಾಜ್ ವ್ಯಂಗ್ಯವಾಡಿದರು.

'11 ಜನ  ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಕೊಟ್ಟ ನ್ಯಾಯಮೂರ್ತಿ ಸಾಳ್ವೆಯವರು ಅವಧಿಪೂರ್ಣ ಬಿಡುಗಡೆ ವಿಷಯ ತಿಳಿದು ಆತಂಕವಾಗಿದ್ದಾರೆ. ನನ್ನನ್ನೊಮ್ಮೆ ಕೇಳಬಹುದಿತ್ತು. ನಾನು ಅವರಿಗೆ ಯಾಕೆ ಜೀವಾವಧಿ ಶಿಕ್ಷೆ ಕೊಟ್ಟಿದ್ದೆ ಎಂದು ಹೇಳುತ್ತಿದ್ದೆ' ಎಂದು ಸಾಳ್ವೆ  ಹೇಳಿದ್ದನ್ನು ಉಲ್ಲೇಖಿಸಿದರು.

ಮಹಿಳಾ ಹೋರಾಟಗಾರ್ತಿ ಉಮಾದೇವಿ ಮಾತನಾಡಿ, ಗಲಭೆಗಳಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡುವುದನ್ನು ಕೆಲವರು ಒಂದು ಅಸ್ತ್ರವನ್ನಾಗಿ  ಬಳಸಿಕೊಂಡಿದ್ದಾರೆ. ನಮಗೆ ಯಾವ ಪಕ್ಷದ ಮೇಲೂ ನಂಬಿಕೆ ಇಲ್ಲ. ನ್ಯಾಯಾಂಗದ ಮೇಲೆ ಒಂದಷ್ಟು ನಂಬಿಕೆ ಇತ್ತು ಈಗ ಅದೂ ಹೊರಟುಹೋಗಿದೆ. ಹೋರಾಟಗಳನ್ನು ರೂಪಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಹಿರಿಯ ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ಆಡಳಿತ ಮತ್ತು ನ್ಯಾಯಾಂಗದ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟುಹೋಗಿದೆ. ಒಬ್ಬಳೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಅವರ ಕುಟುಂಬದ 12 ಜನರನ್ನು ಕೊಂದ 11 ಜನರನ್ನು ಯಾವ ಆಧಾರದಲ್ಲಿ ಬಿಟ್ಟಿದ್ದಾರೆ. ಇದೊಂದು ಘೋರ ಅನ್ಯಾಯ. ಇದನ್ನು ಸಂಘಟಿತರಾಗಿ ಪ್ರತಿಭಟಿಸಬೇಕು. ಇನ್ನುಮುಂದೆ ಮನೆ ಮನೆಗೂ ಹೋಗಿ ಈ ವ್ಯವಸ್ಥೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಪ್ರತಿಭಟನೆಯಲ್ಲಿ ಸಾಹಿತಿ ಡಾ.ಇ.ರತಿರಾವ್, ಡಾ.ವಿ.ಲಕ್ಷ್ಮಿನಾರಾಯಣ, ಡಾ.ಪಂಡಿತಾರಾಧ್ಯ, ಕಾಳಚನ್ನೇಗೌಡ, ಡಾ.ಬಿ.ಜೆ.ವಿಜಯಕುಮಾರ್,  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಪತ್ರಕರ್ತ ಕೆ.ದೀಪಕ್, ರೈತ ಮುಖಂಡ ಪಿ.ಮರಂಕಯ್ಯ, ಜನಾರ್ಧನ್,  ಕಮಲ್‌ಗೋಪಿನಾಥ್, ಜವರಯ್ಯ, ಸೈಯದ್ ಕಲೀಂ, ಮಾಳವಿಕ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉತ್ತಮ ಜಾತಿಯ ಹೆಣ್ಣು ಮಕ್ಕಳನ್ನು ಕೆಳಜಾತಿಯವರು ಅತ್ಯಾಚಾರ ಮಾಡಿದರೆ ಎನ್‌ಕೌಂಟರ್ ಮಾಡುವುದು. ಕೆಳವರ್ಗದ ಹೆಣ್ಣುಮಕ್ಕಳನ್ನು ಮೇಲ್ಜಾತಿಯವರು ಅತ್ಯಾಚಾರ ಮಾಡಿದರೆ ಸನ್ನಡತೆ ಆಧಾರದಲ್ಲಿ ಬಿಡುವುದು ಯಾವ ನ್ಯಾಯ? ಇದು ಎರಡು ಸಂಸ್ಕೃತಿಯನ್ನು ಭಿನ್ನ ಮಾಡುವ ಕ್ರಮ.

- ಸಿ.ಬಸವಲಿಂಗಯ್ಯ, ಹಿರಿಯ ರಂಗಕರ್ಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News