ಬಿಲ್ಕಿಸ್ ಬಾನುಗೆ ನ್ಯಾಯ ಒದಗಿಸಲು ಪಟ್ಟು: ಗುಜರಾತ್ ಸರಕಾರದ ನಡೆಗೆ ರಾಜ್ಯದೆಲ್ಲೆಡೆ ಆಕ್ರೋಶ

Update: 2022-08-27 14:12 GMT

ಬೆಂಗಳೂರು, ಆ.27: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಮಂದಿ ಅಪರಾಧಿಗಳನ್ನು ಗುಜರಾತಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಬಹುತ್ವ ಕರ್ನಾಟಕ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರು ಒಳಗೊಂಡಂತೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಕೀಲರು, ಸಾಹಿತಿಗಳು, ದಲಿತ ಸಂಘಟನೆಗಳ ಮುಖಂಡರು, ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರು ಪಾಲ್ಗೊಂಡಿದ್ದರು.

ಇದನ್ನೂ ಓದಿ>>>  ಬಿಲ್ಕೀಸ್ ಬಾನು ಪ್ರಕರಣದ ಆರೋಪಿಗಳ ಬಿಡುಗಡೆ 2 ದಶಕಗಳ ಗಾಯವನ್ನು ಹಸಿಯಾಗಿಸಿದೆ: ನಟ ಪ್ರಕಾಶ್ ರಾಜ್

ಪ್ರತಿಭಟನೆಯ ಕೇಂದ್ರ ಬಿಂದು ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಹೋರಾಟಗಾರರು, ಬಿಲ್ಕಿಸ್ ಬಾನು ಅವರಿಗೆ ಧೈರ್ಯ ತುಂಬಲು ಸಾವಿರಾರು ಪತ್ರಗಳನ್ನು ಬರೆದು, ಪೆಟ್ಟಿಗೆಯಲ್ಲಿ ತುಂಬಿಸಿದರು. ಆನಂತರ, ಗುಜರಾತ್ ಸರಕಾರ ಬಿಡುಗಡೆ ಮಾಡಿದ ಎಲ್ಲ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಿ, ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ ಮುಂದಾಗಬೇಕು ಎಂದು ಘೋಷಣೆ ಕೂಗಿ ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು, ದೇಶದ ಪ್ರಗತಿಗೆ ಮಹಿಳೆಯರ ಕುರಿತು ಗೌರವದ ಭಾವನೆ ಅತ್ಯಗತ್ಯ. ಅವರ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ ಸಂದರ್ಭದಲ್ಲೇ ಅವರ ತವರು ರಾಜ್ಯದಲ್ಲೇ ಇಂತಹ ಖಂಡನೆ ನಡೆದಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

2018ರಲ್ಲಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಕೈಗೊಂಡ ತೀರ್ಮಾನದ ಪ್ರಕಾರ ಮರಣ ದಂಡನೆ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಅರ್ಹರಲ್ಲ ಎಂದು ಆದೇಶ ನೀಡಲಾಗಿತ್ತು. ಆದರೆ ಗುಜರಾತ್ ಸರಕಾರ ಇದೆಲ್ಲವನ್ನು ಧಿಕ್ಕರಿಸಿ ಬಿಡುಗಡೆ ಮಾಡಿರುವುದು ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಅಧ್ಯಕ್ಷರೂ ಆದ ಲೇಖಕ ಆಕಾರ್ ಪಟೇಲ್, ಮಾನವೀಯ ವಿರೋಧಿ ಘಟನೆಗಳು ನಡೆದಾಗ ಎಲ್ಲ ಸಂಘ ಸಂಸ್ಥೆಗಳು ಜಂಟಿಯಾಗಿ ಖಂಡಿಸಬೇಕು. ಬಿಲ್ಕಿಸ್ ಬಾನು ಅವರು ಸತತ ಎರಡು ದಶಕಗಳಿಂದ ನೋವು ಅನುಭವಿಸುತ್ತಿದ್ದಾರೆ. ಇಂತಹ ಮಹಿಳೆಗೆ ಈಗಲೂ ನ್ಯಾಯ ದೊರೆತಿಲ್ಲ. ಹೀಗಿರುವಾಗ, ನಾವು ಹೋರಾಟ ಮುಂದುವರೆಸಬೇಕಾಗಿದೆ ಎಂದು ತಿಳಿಸಿದರು.

ರಂಗಕರ್ಮಿ ಕೆ.ರಾಮಯ್ಯ ಮಾತನಾಡಿ, ಬಿಲ್ಕಿಸ್ ಬಾನು ನಮ್ಮ ಮನೆಯ ಹೆಣ್ಣು ಮಗು ಇದ್ದಂತೆ. ಆಕೆಗೆ ಆಗಿರುವ ಅನ್ಯಾಯ ಮತ್ತೆ ಯಾರಿಗೂ ಬೇಡ. ಸರಕಾರದ ನಿರ್ಧಾರದ ವಿರುದ್ಧ ನಾವು ದಟ್ಟ ಧ್ವನಿಯಲ್ಲಿ ಮಾತನಾಡಬೇಕಾಗಿದೆ ಎಂದರು.

ಹಿರಿಯ ಸಾಹಿತಿ ಮಮತಾ ಸಾಗರ್ ಮಾತನಾಡಿ, ರಾಜಕೀಯ ಅಂಕಗಳನ್ನು ಗಳಿಸಲು ಗುಜರಾತ್ ಸರಕಾರ ಮಹಿಳೆಯರ ದೇಹವನ್ನು ಬಳಕೆ ಮಾಡುತ್ತಿದೆ ಎಂದು ಟೀಕಿಸಿದರು.

ಚಿಂತಕಿ ಕೆ.ಎಸ್.ವಿಮಲಾ ಮಾತನಾಡಿ, ಮಥುರಾ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಬಿಲ್ಕಿಸ್ ಅವರ ಪ್ರಕರಣವರೆಗೂ ನಮ್ಮ ಕಾನೂನಿನ ಸಂಸ್ಥೆಗಳು ಮಹಿಳೆಯರನ್ನು ವಿಫಲಗೊಳಿಸುತ್ತಿದೆ ಎಂದರು.

ಬಿಜೆಪಿ ಶಾಸಕರೊಬ್ಬರು ಅಪರಾಧಿಗಳು ಬ್ರಾಹ್ಮಣರು ಹಾಗೂ ಉತ್ತಮ ಸಂಸ್ಕಾರದ ಪುರುಷರು ಎಂದು ಉಲ್ಲೇಖಿಸಿದ್ದರು. ಹಾಗಿದ್ದರೆ, ಗುಜರಾತ್ ಸರಕಾರವು ಅನುಸರಿಸುತ್ತಿರುವುದು ಮನುಸ್ಮøತಿಯೇ ಎಂದು ಹೋರಾಟಗಾರ್ತಿ ನಂದಿನಿ ಪ್ರಶ್ನೆ ಮಾಡಿದರು.

ಲೇಖಕಿ ಡಾ.ಕೆ.ಶರೀಫಾ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಮುಸ್ಲಿಮರು ನೀಡಿದ ಕೊಡುಗೆ, ತ್ಯಾಗ, ಬಲಿದಾನವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ, 2002ರ ಗುಜರಾತ್ ಗಲಭೆಯೂ ನಡೆದಿಲ್ಲ ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಮತ್ತೊಂದೆಡೆ ಅಪರಾಧ ಕೃತ್ಯ, ದೌರ್ಜನ್ಯವನ್ನು ಧರ್ಮದ ಆಧಾರದಲ್ಲಿ ನೋಡಿ, ಶೋಷಿತರನ್ನು ಬಲಿಕೊಡುವ ಪ್ರಯತ್ನ ನಿರಂತರ ನಡೆದುಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, 75ನೆ ಸ್ವಾತಂತ್ರ್ಯ ಸಂಭ್ರಮವನ್ನು ಅಮೃತ ಮಹೋತ್ಸವವೆಂದು ಘೋಷಿಸಿದ ಸರಕಾರ ಜನರಿಗೆ ಅಮೃತ ಬದಲು ವಿಷವುಣಿಸಿದೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡ ಆರ್.ಮೋಹನ್ ರಾಜ್, ಹೋರಾಟಗಾರರಾದ ಚಂದ್ರಮ್ಮ, ಡಾ.ಎಂ.ಕೃಷ್ಣನ್, ವಿನಯ್ ಶ್ರೀನಿವಾಸ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.


ರಾಜ್ಯಪಾಲರ ಬಳಿ ಹಕ್ಕುಮಂಡನೆ

ಹೋರಾಟದ ಬಳಿಕ ರಾಜ್ಯಪಾಲರಿಗೆ ಹಕ್ಕು ಮಂಡನೆ ಪತ್ರ ತಲುಪಿಸಲಾಯಿತು. ಗುಜರಾತ್ ಸರಕಾರ ಬಿಡುಗಡೆ ಮಾಡಿದ ಎಲ್ಲ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಿ, ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ ಮುಂದಾಗಬೇಕು. ಜತೆಗೆ, ಬಿಲ್ಕಿಸ್ ಬಾನು ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News