ಬಿಜೆಪಿ ದೇಶವನ್ನು ಉತ್ತರ, ದಕ್ಷಿಣ ಎಂದು ವಿಭಜಿಸಲು ಹೊರಟಿದೆ: ಯು.ಟಿ ಖಾದರ್

Update: 2022-08-27 14:25 GMT

ಆಲ್ದೂರು, ಆ.27: 'ಬಿಜೆಪಿ ದೇಶವನ್ನು ಉತ್ತರ ಭಾರತ, ದಕ್ಷಿಣ ಭಾರತ ಎಂದು ವಿಭಜನೆ ಮಾಡಲು ಹೊರಟ್ಟಿದ್ದು, ಹೋರಾಟ, ಜನಜಾಗೃತಿ ಮೂಲಕ ಬಿಜೆಪಿ ಪಕ್ಷದ ಹಿಡನ್ ಅಜೆಂಡಾಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬಿಜೆಪಿ ಮುಕ್ತ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಣತೊಡಬೇಕು' ಎಂದು ವಿಧಾನ ಪರಷತ್ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಕರೆ ನೀಡಿದರು.

ಆಲ್ದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಶನಿವಾರ ಭೂತನಕಾಡಿನಿಂದ ಆಲ್ದೂರುವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಆಲ್ದೂರು ಪಟ್ಟಣದ ನಾರಾಯಣಗುರು ಸಮುದಾಯಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶವನ್ನು ಉತ್ತರ ಭಾರತ, ದಕ್ಷಿಣ ಭಾರತ ಎಂದು ವಿಭಜನೆ ಮಾಡಲು ಹೊರಟಿದ್ದು, ಕಾಂಗ್ರೆಸ್ ಪಕ್ಷ ದೇಶದಲ್ಲಿರುವ ತನಕ ಇದು ಸಾಧ್ಯವಿಲ್ಲ, ಇಂದಿರಾಗಾಂಧಿಯವರ ರಕ್ತ ಉತ್ತರ ಭಾರತದಲ್ಲಿ ಬಿದ್ದಿದ್ದರೆ, ದಕ್ಷಿಣ ಭಾರತದಲ್ಲಿ ರಾಜೀವ್ ಗಾಂಧಿಯವರ ರಕ್ತ ಬಿದ್ದಿದೆ. ಉತ್ತರ ಭಾರತ, ದಕ್ಷಿಣ ಭಾರತ ಎಂದು ದೇಶವನ್ನು ಎರಡು ಹೋಳು ಮಾಡಲು ಕಾಂಗ್ರೆಸ್ ಪಕ್ಷ ಎಂದಿಗೂ ಬಿಡಲ್ಲ. ಬಿಜೆಪಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದರೇ ಕಾಂಗ್ರೆಸ್ ದೇಶ ಹಾಗೂ ದೇಶದ ಜನರನ್ನು ಒಂದುಗೊಡಿಸುವ ಕೆಲಸ ಮಾಡುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾತ್ರ ಶೂನ್ಯ, ಸಾವರ್ಕರ್ ಅವರನ್ನು ನೆಹರೂ ಅವರಿಗೆ ಹೋಲಿಕೆ ಮಾಡುತ್ತಾರೆ. ಆದರೆ ಸಾವರ್ಕರ್ ಬ್ರಿಟೀಷರ ಹತ್ತಿರ ನಾನು ಸ್ವಾತಂತ್ರ್ಯ ಹೋರಾಟಕ್ಕೆ ಹೋಗುವುದಿಲ್ಲ, ನಾನು ನಿಮ್ಮ ಸೇವೆ ಮಾಡಿಕೊಂಡುರುತ್ತೇನೆ, ನನ್ನನ್ನು ಬಿಡುಗಡೆ ಮಾಡಿ ಎಂದು ಹಲವು ಪತ್ರಗಳನ್ನು ಬರೆದು ಕ್ಷಮೆ ಕೇಳುತ್ತಾರೆ. ಆದರೆ ನೆಹರು ಅವರು ತನ್ನ ಪತ್ನಿಗೆ ಪತ್ರ ಬರೆದು ಬ್ರಿಟೀಷರು ನನ್ನನ್ನು ಬಂಧನ ಮಾಡಿದ್ದಾರೆ. ನನ್ನನ್ನು ಬಿಡುತ್ತಾರೋ ಇಲ್ಲವೋ ಎಂದು ಪತ್ರ ಬರೆಯುತ್ತಾರೆ. ಇದೇ ನೆಹರು ಹಾಗೂ ಸಾವರ್ಕರ್ ಅವರಿಗೆ ಇರುವ ವೆತ್ಯಾಸ. ಬಿಜೆಪಿಯವರು ಸಾವರ್ಕರ್‍ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಿದ್ದಾರೆ, ಆದರೆ ಬ್ರಿಟಿಷರ ಕ್ಷಮೆ ಯಾಚಿಸಿದವರು ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ ಎಂದು ಖಾದರ್ ಪ್ರಶ್ನಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಗಾಂಧಿ, ನೆಹರು ಬ್ರಿಟೀಷರ ವಿರುದ್ಧ  ಸ್ವಾತಂತ್ರ್ಯ ಹೋರಾಟ ಮಾಡಿ ಸ್ವಾತಂತ್ರ್ಯವನ್ನು ದೇಶಕ್ಕೆ ಹೇಗೆ ತಂದು ಕೊಟ್ಟರೋ ಅದೇ ರೀತಿ ಬಿಜೆಪಿಯವರ ಜೊತೆ ಹೋರಾಡಿ ನಾವು ಅಧಿಕಾರ ಮರಳಿ ಪಡೆಯಬೇಕಿದೆ. ಇಂದಿನಿಂದಲ್ಲೇ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಬಿಜೆಪಿಯನ್ನು ಅಧಿಕಾರದಿಂದ ತೆಗೆದು ಹಾಕಲು ಪಕ್ಷದ ಮುಖಂಡರು, ಕಾರ್ಯಕರ್ತರು ಶಪಥ ಮಾಡಬೇಕಿದೆ ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಮುಹಮದ್ ಮುದಾಫೀರ್, ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಮಾಜಿ ಸಚಿವೆ ಮೋಟಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಯನಾ ಮೋಟಮ್ಮ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಸುಧೀರ್‍ಕುಮಾರ್ ಮುರೊಳ್ಳಿ, ಕೆಪಿಸಿಸಿ ವಕ್ತಾರ ದೇವರಾಜ್, ಮೂಡಿಗೆರೆ ಬ್ಲಾಕ್ ಅಧ್ಯಕ್ಷ ಸುರೇಂದ್ರ, ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ್, ಮಹಿಳಾ ಘಟಕದ ಪ್ರಮುಖರಾದ, ವನಮಾಲಾ ಮೃತ್ಯುಂಜಯ, ಸವಿತಾ ರಮೇಶ್, ನಾಗರತ್ನಾ, ಜಯಶೀಲಾ, ಕಾರ್ಯದರ್ಶಿ ಸುರೇಶ್, ಆಲ್ದೂರು ಹೋಬಳಿ ಅಧ್ಯಕ್ಷ ಪೂರ್ಣೇಶ್ ಸೇರಿದಂತೆ ಗ್ರಾಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News