PSI ನೇಮಕಾತಿ ಹಗರಣ: ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಬಂಧನ

Update: 2022-08-27 14:33 GMT

ಬೆಂಗಳೂರು, ಆ.27: PSI ನೇಮಕಾತಿ ಹಗರಣ ಸಂಬಂಧ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿಯೇ ಮೊದಲನೆ ಸ್ಥಾನ ಪಡೆದಿದ್ದ ರಚನಾ ಹನುಮಂತ(25) ಎಂಬಾಕೆಯನ್ನು ಸಿಐಡಿ ಬಂಧಿಸಿದೆ.

ಅಕ್ರಮ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ನಾಪತ್ತೆಯಾಗಿದ್ದರು. ಇದಾದ ಬಳಿಕ ಸತತವಾಗಿ ಶೋಧ ಕಾರ್ಯ ಕೈಗೊಂಡಿದ್ದ ಸಿಐಡಿ ಪೊಲೀಸರ ತಂಡ, ಶನಿವಾರ ಮಹಾರಾಷ್ಟ್ರ ಗಡಿಯಲ್ಲಿರುವ ಜಿಲ್ಲೆಯ ಆಳಂದ ತಾಲ್ಲೂಕಿನ ಹಿರೋಳ್ಳಿ ಚೆಕ್‍ಪೋಸ್ಟ್ ಬಳಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರುವರೆ ತಿಂಗಳಿಂದ ಪೊಲೀಸರ ಕಣ್ಣುತಪ್ಪಿಸಿ ತಿರುಗಾಡುತ್ತಿದ್ದ ರಚನಾ ಒಂದೆಡೆ ನೆಲೆ ನಿಲ್ಲದೇ ಹಲವು ಕಡೆ ವಾಸ್ತವ್ಯ ಬದಲಾಯಿಸಿದ್ದರು. ಜತೆಗೆ, ಮೊಬೈಲ್‍ಗಳನ್ನು ಆಕೆ ನಿರಂತರ ಬದಲಾವಣೆ ಮಾಡುತ್ತಿದ್ದಳು. ಈ ಸಂಬಂಧ ಖಚಿತ ಮಾಹಿತಿ ಆಧಾರಿಸಿ ವಶಕ್ಕೆ ಪಡೆದು ನಗರದ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ್ ಮುಲ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸಲಾಯಿತು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಚನಾ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದ ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಇನ್ನೂ, ರಾಜ್ಯ ಸರಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಕ್ರಮ ಖಂಡಿಸಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಈಕೆಯೂ ಮುಂಚೂಣಿಯಲ್ಲಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News