ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆ: ಸಿಎಂ ಬೊಮ್ಮಾಯಿ

Update: 2022-08-27 14:52 GMT
(ಸಿರಿಧಾನ್ಯ ಮೇಳ ಉದ್ಘಾಟಿಸುತ್ತಿರುವ ಸಿಎಂ ಬೊಮ್ಮಾಯಿ)

ರಾಯಚೂರು, ಆ. 27: ‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.

ಶನಿವಾರ ರಾಯಚೂರಿನ  ಕೃಷಿ ವಿಶ್ವವಿದ್ಯಾಲಯದಲ್ಲಿ (University of Agricultural Sciences, Raichur) ಆಯೋಜಿಸಿದ್ದ ಸಿರಿಧಾನ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಸಿರಿಧಾನ್ಯ ಬ್ರಾಂಡ್‍ಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾಡಬಹುದು. ‘ಕೆಪೆಕ್' ಮೂಲಕ ರಫ್ತು ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 50 ಕೋಟಿ ರೂ.ಗಳನ್ನು ಒದಗಿಸಿದೆ. ಅದರ ಉಪಯೋಗ ಪಡೆದು ರಫ್ತು ಮಾಡಲು ಕೆಪೆಕ್ ಮೂಲಕ ಎಲ್ಲ ಸಹಾಯ ಮತ್ತು ಸಹಕಾರವನ್ನು ಸರಕಾರ ನೀಡಲಿದೆ' ಎಂದು ಹೇಳಿದರು. 

‘ಕಾಲ ಬದಲಾಗಿದೆ. ಅಕ್ಕಿ ಬೆಳೆಯುತ್ತಿದ್ದೇವೆ. ಅದೇ ನಮಗೆ ಆಹಾರವಾಗಿದೆ. ಆದರೆ ಆರೋಗ್ಯ ಗಮನಿಸಿದಾಗ ಕನಿಷ್ಠವಾಗಿಯಾದರೂ ಸಿರಿಧಾನ್ಯಗಳನ್ನು ಆಹಾರವಾಗಿ ಸೇವಿಸಬೇಕು. ರೈತರು ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಈಗ ಸರಕಾರ ಕಾರ್ಯಕ್ರಮವನ್ನು ಮಾಡಿ ಬೆಳೆಸಲು ಉತ್ತೇಜನ ನೀಡುವ ಸ್ಥಿತಿಗೆ ನಾವು ಬಂದಿದ್ದೇವೆ. ಮಿಲೆಟ್‍ಗಳ ಬಗ್ಗೆ ಅತಿದೊಡ್ಡ ರಾಯಭಾರಿಗಳು ನಾವು. 30 ವರ್ಷಗಳಿಂದ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದೇನೆ.ಅನ್ನವನ್ನು ಊಟ ಮಾಡುವುದಿಲ್ಲ. ಹೀಗಾಗಿ ಸಿರಿಧಾನ್ಯಗಳ ಯಶಸ್ವಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಿದೆ' ಎಂದು ಅವರು ನುಡಿದರು. 

ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ: ‘ಕಲ್ಯಾಣ ಕರ್ನಾಟಕ ಅರೆ ಒಣ ಪ್ರದೇಶ. ಜೈಹಿರಾಬಾದಿನಲ್ಲಿರುವ ಕೃಷಿ ಸಂಸ್ಥೆಯಲ್ಲಿ 108 ವರ್ಷದ ಜೋಳ, ನವಣೆ, ಸಾಮೆಗಳನ್ನು ಸಂರಕ್ಷಣೆ ಮಾಡಿದ್ದು, ರೈತರು ಹೇಗೆ ಬೆಳೆಯಬೇಕೆಂದು ತರಬೇತಿಯನ್ನು ನೀಡುತ್ತಾರೆ. ಇಂತಹ 8 ಸಂಸ್ಥೆಗಳು ಜಗತ್ತಿನಲ್ಲಿದ್ದು, ಈ ಪೈಕಿ ಜೈಹಿರಾಬಾದಿನಲ್ಲಿದೆ. ಇಲ್ಲಿನ ಹವಾಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯಬೇಕು. ಇದಕ್ಕೆ ವಿಶೇಷ ಮಾರುಕಟ್ಟೆ ನಿರ್ಮಾಣ ಮಾಡುವುದು ಸರಕಾರದ ಸಂಘ-ಸಂಸ್ಥೆಗಳ ಕರ್ತವ್ಯ. ರಾಗಿ, ಸಾಮೆ, ನವಣೆ, ಬರಗು, ಉದುಲು, ಹಾರಕ, ಕೊರ್ಲೆ ಎಂಬ ಏಳು ಸಿರಿಧಾನ್ಯಗಳನ್ನು ಬೆಳೆಯುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ 7 ಜಿಲ್ಲೆಗಳಿವೆ. ಏಳು ಜಿಲ್ಲೆಗಳಲ್ಲಿ 7 ಸಿರಿಧಾನ್ಯಗಳನ್ನು ನಾವು ಬೆಳೆಸಬೇಕು. ಅದರ ಉತ್ಪಾದನೆ, ಇಳುವರಿ ಹೆಚ್ಚು ಮಾಡಿ ಗುಣಮಟ್ಟವನ್ನು ಸುಧಾರಿಸಬೇಕು. ರಾಯಚೂರು ಕರ್ನಾಟಕದ ಪ್ರಮುಖ ಸ್ಥಳ. ಇದರ ಸಮಗ್ರ ಅಭಿವೃದ್ಧಿ ಕೃಷಿಗೆ ನೇರವಾದ ಸಂಬಂಧವಿದೆ. ಬರುವ ತಿಂಗಳಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅದರೊಂದಿಗೆ ಕೈಗಾರಿಕಾ ಪಾರ್ಕ್ ಇದೇ ವರ್ಷ ನಿರ್ಮಿಸಲಾಗುವುದು ಎಂದರು. 

ರಾಗಿ ಶ್ರೇಷ್ಠ: ಸಿರಿಧಾನ್ಯಗಳು ಅತ್ಯಂತ ಕಡಿಮೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಬೆಳೆಯುತ್ತವೆ. ಇದರಲ್ಲಿಅತಿ ಹೆಚ್ಚು ಪೌಷ್ಟಿಕಾಂಶವಿರುವಂತದ್ದು ಶಕ್ತಿ ನೀಡುವುದು. 4500 ವರ್ಷಗಳಿಂದ ಬೆಳೆಯುತ್ತಿರುವ, ನಿಸರ್ಗಕ್ಕೆ ಹೊಂದಿಕೊಂಡು ಬೆಳೆಯುವ ಸಿರಿಧಾನ್ಯಗಳು. ಶ್ರೀರಾಮಧ್ಯಾನದಲ್ಲಿ ರಾಗಿ-ಅಕ್ಕಿಯನ್ನು ಹೋಲಿಸುತ್ತಾರೆ. ರಾಗಿಯೇ ಹೆಚ್ಚು ಶ್ರೇಷ್ಠ ಎಂದು ತೀರ್ಮಾನಿಸಿಸುತ್ತಾರೆ' ಎಂದು ಅವರು ತಿಳಿಸಿದರು.

---------------------------

‘ಕರ್ನಾಟಕದ ಜವಳಿ ನೀತಿಯಿಂದ ಪ್ರೋತ್ಸಾಹಗಳಿರುವ ಜವಳಿ ಪಾರ್ಕ್ ನಿರ್ಮಿಸಲಾಗುವುದು. ರಾಜ್ಯ ಸರಕಾರದ ನೆರವಿನಿಂದ ರಾಯಚೂರಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ತಯಾರಿಸುವ ಕಾರ್ಖಾನೆ ಇದೆ. ಉತ್ತಮ ಹತ್ತಿ ಬೆಳೆಯುವ ಕಾಲವಿತ್ತು. ರಫ್ತು ಮಾಡುವಂಥ ಹತ್ತಿ ಬೆಳೆಯಲಾಗುತ್ತಿತ್ತು. ಇದಕ್ಕೆ ಮಾರುಕಟ್ಟೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡುತ್ತೇವೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News