'ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ?': ಸಾವರ್ಕರ್ ಪಠ್ಯದ ಕುರಿತು ಮತ್ತೊಂದು ವಿವಾದ ಸೃಷ್ಟಿ

Update: 2022-08-27 17:20 GMT

ಬೆಂಗಳೂರು, ಆ.27: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕೃತಗೊಂಡ ಪಠ್ಯವು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಎಂಟನೆ ತರಗತಿಯ ದ್ವಿತೀಯ ಭಾಷೆಯ ಕನ್ನಡ ಪಠ್ಯಕ್ಕೆ ಅಳವಡಿಸಿಕೊಂಡಿರುವ ಕೆ.ಟಿ. ಗಟ್ಟಿ ಅವರು ಬರೆದಿರುವ ‘ಕಾಲವನ್ನು ಗೆದ್ದವರು’ ಎಂಬ ಪ್ರವಾಸ ಕಥನದಲ್ಲಿ ಸಾವರ್ಕರ್ ಬಗ್ಗೆ ಪ್ರಸ್ತಾಪಿತ ಪಠ್ಯ ವಿವಾದಕ್ಕೆ ಕಾರಣವಾಗಿದೆ.

ಪಠ್ಯದಲ್ಲಿ ‘ಬ್ರಿಟಿಷರು ಸಾವರ್ಕರ್ (Vinayak Damodar Savarkar) ಅನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‍ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು' ಎಂಬ ಸಾಲುಗಳನ್ನು ಬಳಸಲಾಗಿದೆ. ಇವು ದೇಶಭಕ್ತಿಯ ಅತಿ ಉತ್ಪ್ರೇಕ್ಷತೆಯನ್ನು ತಿಳಿಸುತ್ತದೆ ಎಂಬ ವಿವಾದ ಸೃಷ್ಟಿಯಾಗಿದೆ.

ಪಠ್ಯದಲ್ಲಿ ಈ ಮೊದಲು ಇದ್ದ ವಿಜಯಮಾಲಾ ರಂಗನಾಥ ಅವರ ‘ಬ್ಲಡ್ ಗ್ರೂಪ್’ ಎಂಬ ಪಾಠವನ್ನು ಕೈಬಿಟ್ಟು, ಈ ಪಠ್ಯವನ್ನು ಸೇರಿಸಲಾಗಿತ್ತು, ಪಠ್ಯದ ಪುಟಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಯಾಗುತ್ತಿವೆ.

ಇದನ್ನೂ ಓದಿ>>> ಪ್ರಧಾನಿ ಮೋದಿಗೆ 140 ಸ್ಥಾನಗಳನ್ನು ಗೆಲ್ಲುವ ಮಾತು ಕೊಟ್ಟಿದ್ದೇನೆ: ಬಿ.ಎಸ್. ಯಡಿಯೂರಪ್ಪ

-----------------------------------------------

ಕಾಲವನ್ನು ಗೆದ್ದವರು ಪಠ್ಯದಲ್ಲಿ ಸಾವರ್ಕರ್ ಅವರ ಬಗ್ಗೆ ಉಲ್ಲೇಖಿಸಿದ ಸಾಲುಗಳು ಸುಳ್ಳಲ್ಲವೆ? ನಿಜವೇ ಆಗಿದ್ದರೆ, ಹೇಗೆ ಎಂಬುದನ್ನು ತಿಳಿಸಿ. ನಿಮ್ಮ ಪ್ರಕಾರ ಗಾಳಿಬೆಳಕು ಬರದ, ಒಂದೂ ಕಿಂಡಿ ಕೂಡ ಇರದ ಕೋಣೆಲಿ ಸಾವರ್ಕರ್ ಇದ್ದರು ಎಂದು ಸುಳ್ಳು ಬರೆದು 8ನೇ ತರಗತಿ ಪುಸ್ತಕದಲ್ಲಿ ಹಾಕಿರೋದ್ಯಾಕೆ? ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ? ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಗಾಳಿಬೆಳಕು ಎಲ್ಲಾ ಚೆನ್ನಾಗಿ ಬರುತ್ತಿದ್ದ ಕೋಣೆ ಇದೆಯಲ್ಲವೇ?

-ರೂಪೇಶ್ ರಾಜಣ್ಣ, ಕನ್ನಡಪರ ಹೋರಾಟಗಾರ

--------------------------------------------
ಪಠ್ಯದಲ್ಲಿ ಸಾವರ್ಕರ್‍ನ ಪ್ರಸ್ತಾಪವು ಕಾಲ್ಪನಿಕವಾಗಿ ದೇಶಭಕ್ತಿಯನ್ನು ಉತ್ತುಂಗಕ್ಕೇರಿಸಲು ಉದ್ದೇಶಪೂರ್ವಕವಾಗಿ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯೇ ಮರೆಯಾಗಬಹುದು.

-ಪಟ್ಟಾಭಿರಾಮ ಸೋಮಯಾಜಿ, ಲೇಖಕ, ವಿಮರ್ಶಕ

​------------------------------------

'ಸಾವರ್ಕರ್ ಕತ್ತಲು ಕೋಣೆಯಲ್ಲಿ ಜೈಲುವಾಸ ಅನುಭವಿಸಿದ್ದಾರೆ ಎಂದು ಒಂದು ಗುಂಪು ಹೇಳುತ್ತದೆ. ಆದರೆ ಈಗ ಸಾವರ್ಕರ್ ಇದ್ದ ಕೋಣೆಗೆ ಪಕ್ಷಿಗಳು ಬಂದು ಹೋಗುತ್ತಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಪಕ್ಷಿಗಳ ರೆಕ್ಕೆಯ ಮೇಲೆ ಕುಳಿತು ಹೋಗಿದ್ದ ಎಂದು ಲೇಖಕರು ಬರೆದಿದ್ದಾರೆ. ಇದನ್ನು ಪಠ್ಯದಲ್ಲಿ ಅಳವಡಿಸಿದ್ದಾರೆ. ಇದು ಶಿಕ್ಷಣದ ದುಸ್ಥಿತಿಯಾಗಿದೆ. ಸಾವರ್ಕರ್ ಬಲ್‍ಬುಲ್ ಹಕ್ಕಿಯ ರೆಕ್ಕೆಯ ಮೇಲೆ ಹತ್ತಿ ಹೋಗಿದ್ದಾರೆ. ಇದನ್ನು ಬರೆದ ಕೆ.ಟಿ.ಗಟ್ಟಿ, ಅಳವಡಿಸಿದ ರೋಹಿತ್ ಚಕ್ರತೀರ್ಥ ಹಾಗೂ ಸಚಿವ ಬಿ.ಸಿ. ನಾಗೇಶ್ ಕಾಗೆಯ ರೆಕ್ಕೆ ಮೇಲೆ ಹೋಗಲಿ'.

-ಕುಂ. ವೀರಭದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News