ಸುಪ್ರೀಂಕೋರ್ಟ್ ಮೊರೆ ಹೋಗಲು ವಕ್ಫ್ ಬೋರ್ಡ್ ನಿರ್ಧಾರ: ಝಮೀರ್ ಅಹ್ಮದ್ ಖಾನ್

Update: 2022-08-28 12:18 GMT

ಬೆಂಗಳೂರು, ಆ.28: ‘ಚಾಮರಾಜಪೇಟೆ(Chamarajpet) ಈದ್ಗಾ ಮೈದಾನ(Idgah Maidan) ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್(Supreme Court) ಮೊರೆ ಹೋಗಲು ರಾಜ್ಯ ವಕ್ಫ್ ಬೋರ್ಡ್(Waqf Board) ನಿರ್ಧರಿಸಿದೆ' ಎಂದು ಕ್ಷೇತ್ರದ ಶಾಸಕ ಬಿ.ಝೆಡ್. ಝಮೀರ್ ಅಹ್ಮದ್ ಖಾನ್(Zameer Ahmed) ಅವರು ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಮವಾರ(ಆ.29) ಸುಪ್ರೀಂಕೋರ್ಟ್‍ನಲ್ಲಿ ಈ ಸಂಬಂಧ ವಕ್ಫ್ ಬೋರ್ಡ್ ಅರ್ಜಿ ಸಲ್ಲಿಸಲಿದೆ. ಅಲ್ಲದೆ, ವಕ್ಫ್ ಬೋರ್ಡ್ ಪರವಾಗಿ ವಕಾಲತ್ತು ವಹಿಸಲು ದೇಶದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸಮ್ಮತಿ ಸೂಚಿಸಿದ್ದಾರೆ' ಎಂದು ಹೇಳಿದರು.

‘ಹೈಕೋರ್ಟ್ ಏಕ ಸದಸ್ಯ ಪೀಠ ಈದ್ಗಾ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನೀಡಿದ್ದ ಮಧ್ಯಂತರ ಆದೇಶದಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಿತ್ತು. ಆದರೆ, ತದನಂತರ, ರಾಜ್ಯ ಸರಕಾರವು ಈ ಆದೇಶವನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೊರೆ ಹೋಗಿ ಮನವಿ ಸಲ್ಲಿಸಿತು. ಅದನ್ನು ಪುರಸ್ಕರಿಸಿ ದ್ವಿಸದಸ್ಯ ಪೀಠವು ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಿದೆ' ಎಂದು ಅವರು ಹೇಳಿದರು.

‘ದ್ವಿಸದಸ್ಯ ಪೀಠದ ಮಧ್ಯಂತರ ಆದೇಶದಿಂದಾಗಿ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಹಾನಿಯಾಗಿದೆ. ಆದುದರಿಂದ, ವಕ್ಫ್ ಬೋರ್ಡ್ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಲಿದೆ' ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಇದನ್ನೂ ಓದಿ: ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ: ಆರಗ ಜ್ಞಾನೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News