ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಸ್ವಾಮೀಜಿ ಪೊಲೀಸ್ ವಶಕ್ಕೆ?
ಹಾವೇರಿ, ಆ.29:ರಾಜ್ಯದ ಪ್ರತಿಷ್ಠಿತ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರೆನ್ನಲಾದ ಸ್ವಾಮೀಜಿಯನ್ನು ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಅವರನ್ನು ಪೊಲೀಸರು ಚಿತ್ರದುರ್ಗದತ್ತ ಕರೆದುಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮಠದ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
"ಪೊಲೀಸರು ವಶಕ್ಕೆ ಪಡೆದಿಲ್ಲ"
ಆದರೆ ಈ ನಡುವೆ "ಸ್ವಾಮೀಜಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು. ಅವರು ಮಠದ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಾವೇರಿಗೆ ತೆರಳಿದ್ದರು. ಅವರು ಮಧ್ಯಾಹ್ನದ ವೇಳೆ ಮಠಕ್ಕೆ ವಾಪಸ್ ಆಗಲಿದ್ದಾರೆ" ಎಂದು ಮಠದ ಸಲಹಾ ಸಮಿತಿ ಸದಸ್ಯ ಆನಂದಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಮುರುಘಾ ಶರಣರ ವಿರುದ್ಧ FIR
ಪೊಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು.
ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಅವರ ಮಠದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಸ್ಟೆಲ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು 'ತಮಗೆ ಡಾ.ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡುತ್ತಿದ್ದರು. ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ವಾರ್ಡನ್ ಹಣ್ಣುಗಳನ್ನು ತೆಗೆದುಕೊಂಡು ಸ್ವಾಮೀಜಿ ಬಳಿ ಹೋಗುವಂತೆ ಒತ್ತಾಯ ಮಾಡುತ್ತಿದ್ದರು. ಹಾಗೆ ಹೋದ ವೇಳೆ ವಿದ್ಯಾರ್ಥಿನಿಯರಿಗೆ ಮತ್ತು ಬರುವಂತೆ ಮಾಡಿ ಸ್ವಾಮೀಜಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು' ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಡಾ.ಶಿವಮೂರ್ತಿ ಮುರುಘಾ ಸ್ವಾಮೀಜಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ನಡುವೆ ಆರೋಪಕ್ಕೆ ಸಂಬಂಧಿಸಿ ಡಾ.ಶಿವಮೂರ್ತಿ ಮುರುಘಾ ಶರಣರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಮುರುಘಾ ಮಠದೊಳಗಿದ್ದುಕೊಂಡು ತನ್ನ ವಿರುದ್ಧ ಷಡ್ಯಂತ್ರ, ಪಿತೂರಿ, ಸಂಚು ನಡೆದಿದೆ. ಈ ಬಗ್ಗೆ ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ. ನಾವು ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದ್ದರು.