ರಾಮನಗರದಲ್ಲಿ ಭಾರೀ ಮಳೆ: ಗ್ರಾಮಗಳು ಜಲಾವೃತ, ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು

Update: 2022-08-29 12:55 GMT

ರಾಮನಗರ, ಆಗಸ್ಟ್ 29: ರಾಮನಗರದಲ್ಲಿ ಭಾರೀ ಮಳೆಯಿಂದಾಗಿ (Heavy Rain) ಬೆಂಗಳೂರು-ಮೈಸೂರು ಹೆದ್ದಾರಿಯ ಹಲವು ಕಡೆ ನೀರು ನಿಂತಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. 

ಜಿಲ್ಲೆಯಾದ್ಯಂತ ಮಳೆ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.  ಗ್ರಾಮಗಳು ಜಲಾವೃತಗೊಂಡಿದ್ದು,  ತಗ್ಗುಪ್ರದೇಶಗಳಲ್ಲಿ ಇರುವ ಮನೆ, ಆಸ್ಪ್ರತ್ರೆಗಳಿಗೆ ನೀರು ನುಗ್ಗಿದೆ.  ಇನ್ನು  ಮೈಸೂರು- ಬೆಂಗಳೂರು ನಡುವೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.

ಸಂಗನಬಸವನದೊಡ್ಡಿ ಸಮೀಪದ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಬಸ್ ಹಾಗೂ ಕಾರುಗಳು ಮುಳುಗಿವೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಈ ಹಿನ್ನೆಲೆಯಲ್ಲಿ ಹೆದ್ದಾರಿಗೆ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ,  ಸಾರ್ವಜನಿಕರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸದಂತೆ ವಿನಂತಿ ಮಾಡಿಕೊಂಡಿದ್ದಾರೆ.

"ಸಾರ್ವಜನಿಕರಲ್ಲಿ ನನ್ನ ವಿನಂತಿ, ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ. ಬೆಂಗಳೂರು-ಬೆಂಗಳೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿ'' ಎಂದು ಮನವಿ ಮಾಡಿದ್ದಾರೆ.

'ರಾಮನಗರ, ಚನ್ನಪಟ್ಟಣದಲ್ಲಿ ಮಳೆಯಿಂದ ಉಂಟಾಗಿರುವ ದುಸ್ಥಿತಿಯ ಬಗ್ಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿದ್ದೇನೆ. ಅವರು ಇನ್ನು ಸ್ವಲ್ಪ ಹೊತ್ತಿನಲ್ಲಿ ಜಿಲ್ಲೆಗೆ ಭೇಟಿ ನೀಡಿ, ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ತಕ್ಷಣ ಸಂತ್ರಸ್ತರಿಗೆ ಸರಕಾರವು ಎಲ್ಲ ರೀತಿಯ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ. ನನ್ನ ಮನವಿಗೆ ಓಗೊಟ್ಟು ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.' ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News