ನಾನು ನಿಮ್ಮ ಮನೆ ಜೀತಕ್ಕಿಲ್ಲ, ಆರೋಪ ಸಾಬೀತು ಮಾಡಿದರೆ ನೇಣಿಗೇರಲು ಸಿದ್ಧ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ

Update: 2022-08-29 13:54 GMT

ಬೆಂಗಳೂರು, ಆ. 29: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಯಾರದ್ದೋ ಮಾತು ಕೇಳಿಕೊಂಡು ನನ್ನ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ನಾನು ಎಲ್ಲಿಯೂ, ಯಾರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿಲ್ಲ. ಯಾರು, ಏನು ಎಂಬ ವ್ಯತ್ಯಾಸವಿಲ್ಲದೆ ಸಿದ್ದರಾಮಯ್ಯ ಮನಸೋ ಇಚ್ಛೆ ಮಾತನಾಡುವುದು ಗೌರವ ತರುವುದಿಲ್ಲ' ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏನ್ರೀ..ನನ್ನ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದೀರಿ. ನಾನೇನು ನಿಮ್ಮ ಮನೆಯಲ್ಲಿ ಜೀತಕ್ಕೆ ಇದ್ದೇನೆಯೇ? ‘ಒಂದು ಲಕ್ಷ ಮನೆಗಳಿಗೆ ನಮ್ಮ ಸರಕಾರ ಮಂಜೂರಾತಿ ನೀಡಿ, ಕಾರ್ಯಾದೇಶ ಹೊರಡಿಸಿದೆ. ಆದರೆ, ಸೋಮಣ್ಣ ಬಂದು ರದ್ದು ಮಾಡಿದರು' ಎಂದು ಹೇಳಿಕೆ ಕೊಟ್ಟಿದ್ದೀರಿ. ಯಾರ್ಯಾರೋ ಮಾತುಗಳನ್ನು ಕೇಳಿ ಏನೇನೋ ಮಾತನಾಡಬೇಡಿ. ಅವರು ಏನೇನು ಅಕ್ರಮ ಮಾಡಿದ್ದಾರೆಂಬ ಮಾಹಿತಿ ಗೊತ್ತಿದೆ' ಎಂದು ತಿರುಗೇಟು ನೀಡಿದರು.

‘ನೀವು ಮೈಸೂರಿನಲ್ಲಿ ಯಾರ ಹೆಸರಲ್ಲಿ ಎಲ್ಲೆಲ್ಲಿ ಆಸ್ತಿ ಮಾಡಿದ್ದೀರಿ ಹೇಳ್ಲಾ? ರೀ ಡೂ ಹೆಸರಲ್ಲಿ ಏನೇನು ಮಾಡಿದ್ದೀರಿ ಎಂಬುದು ಗೊತ್ತು. ಕಾಲ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇವೆ. ನಾಯಿ-ನರಿಗಳ ಜತೆ ಸೇರಿ ನನ್ನ ವಿರುದ್ಧ ಬಾಯಿಗೆ ಬಂದಂತೆ ತಮ್ಮ ಘನತೆ ಮೀರಿ ಸಿದ್ದರಾಮಯ್ಯ ಮಾತನಾಡಿರುವುದು ನೋವು ಉಂಟು ಮಾಡಿದೆ' ಎಂದು ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

‘ಇಲಾಖೆಯಿಂದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಈಗಾಗಲೇ 493 ಜಾಗ ಹಸ್ತಾಂತರ ಮಾಡಿ, ಕಾರ್ಯಾದೇಶ ಹೊರಡಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಸೆ.7ಕ್ಕೆ 2ಸಾವಿರ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಿದ್ದೇವೆ. 48 ಸಾವಿರ ಮನೆಗಳ ಪೈಕಿ 46 ಸಾವಿರ ಮನೆಗಳು ಪ್ರಗತಿಯಲ್ಲಿವೆ. 10 ಸಾವಿರ ಮನೆ ಕೊನೆ ಹಂತದಲ್ಲಿದ್ದು, 17 ಸಾವಿರ ಮನೆಗಳ ನಿರ್ಮಾಣ ಕಾರ್ಯಾರಂಭವಾಗಿದೆ. 583 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದ್ದೇವೆ' ಎಂದು ಮಾಹಿತಿ ನೀಡಿದರು.

‘ನನ್ನ ವಿರುದ್ದ ಕಮಿಷನ್ ಆರೋಪ ಮಾಡಿದ್ದೀರಿ. ನಾನಲ್ಲ ನನ್ನ ಎಕ್ಕಡವೂ ಕಮಿಷನ್ ಮುಟ್ಟುವುದಿಲ್ಲ. ನನಗೂ ಘನತೆ, ಗೌರವವಿದೆ. ಬೇರೆಯವರ ಬಗ್ಗೆ ಮಾತನಾಡುವ ವೇಳೆ ಎಚ್ಚರ ಇರಲಿ. ನಿಮ್ಮ ಹಿತ ಕಾಯ್ದವರ ಬಗ್ಗೆ ಹೀಗೆಲ್ಲಾ ಮಾತನಾಡಬೇಡಿ. ನನ್ನ ವಿರುದ್ಧದ ಆರೋಪ ಸಾಬೀತಾದರೆ ನಾನು ನೇಣಿಗೆ ಏರಲು ಸಿದ್ಧ' ಎಂದು ಅವರು ಘೋಷಿಸಿದರು.


''ಆತ ದಂಧೆಕೋರ'': 

‘ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಪೂರ್ವಾಪರ ಏನು ಅನ್ನೋದು ಎಲ್ಲರಿಗೂ ಗೊತ್ತು. 10 ಸಾವಿರ ಕೋಟಿ ರೂ. ಬೆಲೆಬಾಳುವ 800 ಎಕರೆ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕಬಳಿಸಿದ ಮಾಜಿ ವಸತಿ ಮಂತ್ರಿ ವಿರುದ್ಧ ಕಳೆದ ಅಧಿವೇಶನದಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶವಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಅದನ್ನ ಹಂಚೋ ಕೆಲಸ ಮಾಡಿದರು. ಇವರ ಕಾಲದಲ್ಲಿ ಆದ ಹಗರಣ ಅದು. ನಾನು ಯಾವುದು ರದ್ದು ಮಾಡಿದ್ದೇನೆ ತೋರಿಸಲಿ, ಒಂದೇ ಒಂದು ಮನೆ ಕಟ್ಟಿಲ್ಲ. ಅವರ ಜೊತೆ ನೀವು ಕೂತು ಮಾತನಾಡೋದು ಎಷ್ಟರ ಮಟ್ಟಿಗೆ ಸರಿ'

-ವಿ.ಸೋಮಣ್ಣ ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News