ನೀರು ನುಗ್ಗಿದ ಮನೆಗಳಿಗೆ 10 ಸಾವಿರ ರೂ. ತಕ್ಷಣ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ರಾಮನಗರ, ಆ. 29: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಕಣ್ವ ನದಿಯಿಂದ ನಾಲ್ಕು ಸಾವಿಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹೊರಗೆ ಬಿಟ್ಟ ಪರಿಣಾಮ ರಾಮನಗರದ ತಗ್ಗು ಪ್ರದೇಶಗಳು ಸೇರಿದಂತೆ ಹಲವಾರು ಗ್ರಾಮಗಳಿಗೆ ಜಲ ದಿಗ್ಬಂಧನದಲ್ಲಿವೆ. ಹತ್ತಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು ಅಕ್ಷರಶಃ ನಡುಗಡ್ಡೆಗಳಾಗಿದ್ದು ಜನತೆ ಆತಂಕಕ್ಕೆ ಸಿಲುಕಿದ್ದಾರೆ.
ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯವಸ್ಥವಾಗಿದ್ದು, ವಾಹನಗಳು ಮೈಲುದ್ದ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಮನಗರದ ತಗ್ಗು ಪ್ರದೇಶಗಳಲ್ಲಿನ ಖಾಸಗಿ ಆಸ್ಪತ್ರೆ, ನೂರಾರು ಮನೆಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಬಹುತೇಕ ರಸ್ತೆ, ಚರಂಡಿಗಳು ಸಂಪೂರ್ಣ ಜಲಾವೃತವಾಗಿವೆ. ಚನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳ ಸಂಚಾರ ಸ್ಥಗಿತವಾಗಿದೆ. ರಾಮಪುರ, ಪಾರಿದೊಡ್ಡಿ, ದೇವರ ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಮಳೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿನ ಹಲವು ಕರೆ, ಕಟ್ಟೆಗಳು ಕೋಡಿ ಬಿದ್ದ ಪರಿಣಾಮ ಮನೆ, ಹೊಲಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಈ ಮಧ್ಯೆ ಮಳೆಯಿಂದಾಗಿ ನೀರು ನುಗ್ಗಿದ ರಾಮನಗರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಮುಖಂಡರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಕ್ಷಣವೇ 10 ಸಾವಿರ ರೂ.ಪರಿಹಾರ: ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಕ್ಷಣವೇ 10 ಸಾವಿರ ರೂ. ಮನೆಯ ಪರಿಕರಗಳ ಖರೀದಿಗೆ ಪರಿಹಾರ ವಿತರಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಸಂಪೂರ್ಣ, ಭಾಗಶಃ ಹಾಗೂ ಅಲ್ಪಸ್ವಲ್ಪ ಮನೆ ಕಳೆದುಕೊಂಡವರಿಗೆ ಕ್ರಮವಾಗಿ 5 ಲಕ್ಷ ರೂ., 3ಲಕ್ಷ ರೂ. ಹಾಗೂ 50 ಸಾವಿರ ರೂ.ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.
ಕೇಂದ್ರ ಸರಕಾರದ ಮಾರ್ಗಸೂಚಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ತ್ವರಿಗತಿಯಲ್ಲಿ ಸಮೀಕ್ಷೆ ನಡೆಸಿ ಒಣಭೂಮಿ ಬೆಳೆಗಳಿಗೆ 10 ಸಾವಿರ ರೂ., ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ 15 ಸಾವಿರ ರೂ. ಹಾಗೂ 28 ಸಾವಿರ ರೂ.ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಾಮನಗರ ಮಾರುತಿ ಬಡಾವಣೆಯಲ್ಲಿ ಭಕ್ಷಿ ಕೆರೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿ, ನಂತರ ನೇರವಾಗಿ ಸುಮಾರು ಅರ್ಧ ಕಿ.ಮೀ. ದೂರ ರೈಲ್ವೆ ಹಳಿಗಳ ಮೇಲೆ ಕಾಲ್ನಡಿಗೆಯಲ್ಲಿ ಹೋದರು. ಭಕ್ಷಿ ಕೆರೆ ಒಡೆದಿರುವ ಜಾಗದಿಂದ ರೈತರ ಮನೆಗೆ ಭೇಟಿ ಕೊಟ್ಟು ಪರಿಹಾರ ನೀಡುವ ಭರವಸೆ ನೀಡಿದರು.
ಸ್ಥಳದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಭಕ್ಷಿ ಕೆರೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ಕೂಡಲೆ ಪರ್ಯಾಯ ರಸ್ತೆ ಮಾರ್ಗಗಳ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ವಾಹನಗಳ ಸುಗಮ ಸಂಚಾರಕ್ಕೆ ತಕ್ಷಣವೇ ಕ್ರಮ ವಹಿಸಬೇಕು' ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದರು.