ದಿಂಗಾಲೇಶ್ವರಶ್ರೀ ಆರೋಪಿಯಾಗಿರುವ ಕೇಸ್‍ನಲ್ಲಿ ಅಂತಿಮ ವರದಿ ಕಾನೂನುಬಾಹಿರ: ಹೈಕೋರ್ಟ್
ಬೆಂಗಳೂರು, ಆ.29: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಆರೋಪಿಯಾಗಿರುವ ಗಂಟಿ ಚೋರ್ ಸಮಾಜದವರ ಮೇಲಿನ ಹಲ್ಲೆ ಕೇಸ್‍ನಲ್ಲಿ ತನಿಖೆ ನಡೆಸಿ ಸಲ್ಲಿಸಿರುವ ಅಂತಿಮ ವರದಿಯು ಕಾನೂನುಬಾಹಿರ ಎಂದು ಧಾರವಾಡ ಹೈಕೋರ್ಟ್ ಹೇಳಿದೆ.
ಗಂಟಿ ಚೋರ್ ಸಮಾಜದವರ ಮೇಲಿನ ಹಲ್ಲೆ ಕೇಸ್‍ನಲ್ಲಿ ಆರೋಪಿಯಾಗಿರುವ ದಿಂಗಾಲೇಶ್ವರ ಶ್ರೀ ಅವರು ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಪ್ರತ್ಯೇಕವಾಗಿ ಮೂರು ಆರೋಪ ಪಟ್ಟಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ, ಮಾನ್ಯ ಮಾಡಿದೆ.
ಒಂದೇ ಅಪರಾಧ ಕೇಸ್‍ಗೆ ಸಂಬಂಧಿಸಿದಂತೆ ಸಿಆರ್‍ಪಿಸಿ ಸೆಕ್ಷನ್ 173ರ ಅಡಿಯಲ್ಲಿ ಪ್ರತ್ಯೇಕವಾಗಿ 3 ದೋಷಾರೋಪಣಾ ಪಟ್ಟಿ ಸಲ್ಲಿಸಲು ಅವಕಾಶವಿಲ್ಲ. ನಿರ್ದಿಷ್ಟ ಆರೋಪಿಗಳು ಯಾವೆಲ್ಲಾ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ತನಿಖಾಧಿಕಾರಿಯು ಪ್ರತ್ಯೇಕ ಮತ್ತು ಸ್ಪಷ್ಟವಾಗಿ ತಿಳಿಸಬೇಕೆಂದು ಪೀಠ ಆದೇಶದಲ್ಲಿ ತಿಳಿಸಿದೆ.
ಬಾಳೆಹೊಸೂರು ಗ್ರಾಮದಲ್ಲಿ 2015ರ ಜೂ.7ರಂದು ಗ್ರಾ. ಪಂ ಚುನಾವಣೆಗೆ ಸಂಬಂಧಿಸಿದಂತೆ ಗಂಟಿ ಚೋರ್ ಸಮಾಜದವರ ಮಧ್ಯೆ ಗಲಭೆ ಆರಂಭವಾಗಿತ್ತು. ಈ ವೇಳೆಯಲ್ಲಿ ದಿಂಗಾಲೇಶ್ವರ ಶ್ರೀಗಳ ಮತ್ತು ಅವರ ಬೆಂಬಲಿಗರ ಪಾತ್ರದ ಬಗ್ಗೆ ಆರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ದಿಂಗಾಲೇಶ್ವರ ಶ್ರೀಗಳು ಇವೆಲ್ಲವನ್ನೂ ಒಟ್ಟಾಗಿಸಿ, ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.