ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತ ಬಾಲಕಿಯರನ್ನು ಭೇಟಿಯಾದ ಮಕ್ಕಳ ಆಯೋಗದ ಅಧ್ಯಕ್ಷೆ
ಚಿತ್ರದುರ್ಗ, ಆ.29: ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆಂದು ಆರೋಪಿಸಿರುವ ಅಪ್ರಾಪ್ತ ವಯಸ್ಸಿನ ಇಬ್ಬರು ಸಂತ್ರಸ್ತ ಬಾಲಕಿಯರನ್ನು ಮಕ್ಕಳ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಜಯಶ್ರೀ ಅವರು ಸೋಮವಾರ ಭೇಟಿ ಮಾಡಿದರು.
ಬಾಲಕಿಯರ ಬಾಲ ಮಂದಿರಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಅವರೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿದೇವಿ, ಪೊಲೀಸ್ ವರಿಷ್ಠಾಧಿಕಾರಿ ಪರುಶರಾಮ್ ಇದ್ದರು.
ಈ ಸಂದರ್ಭ ಪೊಕ್ಸೊ ಪ್ರಕರಣ ಮತ್ತು ಸಂತ್ರಸ್ತ ಬಾಲಕಿಯರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಚಿತ್ರದುರ್ಗದ ಇಬ್ಬರು ಬಾಲಕಿಯರು ಮುರುಘಾ ಮಠದ ಸ್ವಾಮೀಜಿ ಮುರುಘಾ ಶರಣರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆಂದು ಆರೋಪಿಸಿ ಮೈಸೂರಿನ ಒಡನಾಡಿ ಸಂಸ್ಥೆಯವರು ಮೈಸೂರಿನಲ್ಲಿ ಪೊಕ್ಸೊ ಕಾಯ್ದೆ ದೂರು ದಾಖಲಿಸಿದ್ದರು. ಅನಂತರ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ವರ್ಗಾವಣೆಯಾಗಿತ್ತು. ಇದರ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯರಿಬ್ಬರನ್ನು ನಿನ್ನೆಯಿಂದ ಪೊಕ್ಸೊ ಕಾಯ್ದೆಯನ್ವಯ ಬಾಲಕಿಯರ ಸ್ವಯಂ ಹೇಳಿಕೆ, ವೈದ್ಯಕೀಯ ತಪಾಸಣೆ ಸೇರಿದಂತೆ ಕಾನೂನಾತ್ಮ ಪ್ರಕ್ರಿಯೆಗಳನ್ನು ಮುಗಿಸಲಾಗಿದೆ.