×
Ad

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಸಚಿವ ಬಿ.ಸಿ ನಾಗೇಶ್‍ ವಿರುದ್ಧ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Update: 2022-08-29 23:40 IST

ಬೆಂಗಳೂರು, ಆ.29: ಕರ್ನಾಟಕ ಸರಕಾರದ ಶೇ.40 ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುವ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿರುವಾಗಲೇ  ಶಿಕ್ಷಣ ಸಚಿವರ ಸಮಕ್ಷಮದಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ 13 ಸಾವಿರ ಶಿಕ್ಷಣ ಸಂಸ್ಥೆಗಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಾಯುಕ್ತ ಇಲಾಖೆ ತನಿಖೆ ನಡೆಸಿ ಭ್ರಷ್ಟ ಸಚಿವರನ್ನು ಸೇರಿ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತಿದೆ.

ರಾಜ್ಯದ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳು ನಡೆಯಲು ಸಚಿವರಿಗೆ ಶೇ.40 ಕಮಿಷನ್ ನೀಡಲೇಬೇಕು ಎಂದು ಎಲ್ಲಾ ಕಡೆಗಳಿಂದಲೂ ಆರೋಪ ಬರುತ್ತಿದ್ದರೂ ಸಹ ತನಿಖಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರಕಾರದ ವಿರುದ್ಧ ಈ ತನಿಖಾ ಸಂಸ್ಥೆಗಳು ಮೌನ ನಿಲುವನ್ನು ತಾಳಿರುವುದು ಖಂಡನೀಯವಾಗಿದೆ. ಇಂತಹ ಗಂಭೀರವಾದ ಆರೋಪಗಳನ್ನು ಮರೆಮಾಚುವ ಸಲುವಾಗಿ ಧರ್ಮ ದಂಗಲ್, ಹಿಜಾಬ್, ಮದ್ರಸಾ ಶಿಕ್ಷಣದಲ್ಲಿ ಹಸ್ತಕ್ಷೇಪ, ಭಗವದ್ಗೀತೆ ಇತ್ಯಾದಿ ವಿಚಾರಗಳನ್ನು ನಿರಂತರವಾಗಿ ಚರ್ಚೆಗೆ ತಂದಿಡುತ್ತಿದ್ದಾರೆ ಎಂದು ಟೀಕಿಸಿದೆ.

ಇದನ್ನೂ ಓದಿ:  ಆಧಾರರಹಿತ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಬಿ.ಸಿ.ನಾಗೇಶ್

ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಕ್ಕೇರಿದ ಅಂದಿನಿಂದ ಬಿಜೆಪಿ ಸರಕಾರದ ಭ್ರಷ್ಟಾಚಾರ ನಿರಂತರವಾಗಿ ಬಯಲಿಗೆ ಬರುತ್ತಿದ್ದು, ಪಿಎಸ್‍ಐ ಹಗರಣ, ಸಮವಸ್ತ್ರದಲ್ಲಿ ಹಗರಣ, ವಿವಿಧ ಪರೀಕ್ಷೆಗಳಲ್ಲಿ ಹಗರಣ, ಶೇ.40 ಕಮಿಷನ್ ಇದೀಗ ಶಿಕ್ಷಣ ಇಲಾಖೆಯಲ್ಲೂ ಬಹುದೊಡ್ಡ ಹಗರಣ ಬೆಳಕಿಗೆ ಬಂದಿದ್ದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‍ರ ಬಣ್ಣ ಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡರೂ, ಸರಕಾರ ನಿಗದಿಪಡಿಸಿದ ಪಠ್ಯಪುಸ್ತಕಗಳು ಇನ್ನೂ ಶಾಲೆಗಳಿಗೆ ತಲುಪಿಲ್ಲ. ಖಾಸಗಿ ಶಾಲೆಗಳಿಗೆ ಪದೇ ಪದೇ ಅಧಿಕಾರಿಗಳು ತೊಂದರೆ ಕೊಡುತ್ತಿದ್ದು, ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ. ಇನ್ನೊಂದೆಡೆ ಸರಕಾರಿ ಶಾಲೆಗಳನ್ನು ಮಾರಾಟಕ್ಕೆ ಇಡುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಕಂಡ ಅತೀ ಭ್ರಷ್ಟ ಮತ್ತು ಕೋಮುವಾದಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News