ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪ್ರಕರಣ ವರ್ಗಾವಣೆ

Update: 2022-08-30 10:54 GMT

ಹೊಸದಿಲ್ಲಿ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ಅಭಿಪ್ರಾಯಗಳು ಬಂದ ಕಾರಣ ಪ್ರಕರಣವನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ವಹಿಸಲಾಗಿದೆ ಎಂದು livelaw.in ವರದಿ ಮಾಡಿದೆ. 

ಗಣೇಶೋತ್ಸವ ಆಚರಣೆ ಮಾಡಲು ರಾಜ್ಯ ಸರಕಾರಕ್ಕೆ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ವಕ್ಫ್‌ ಮಂಡಳಿಯ  ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎ ಎಸ್‌ ಓಕಾ ಹಾಗೂ ಎಂ ಎಂ ಸುಂದ್ರೇಶ್‌ ಅವರಿರುವ  ತ್ರಿಸದಸ್ಯ ಪೀಠದಿಂದ 4:35ಕ್ಕೆ ವಿಚಾರಣೆ ನಡೆಯಲಿದೆ.

ವಕ್ಫ್ ಬೋರ್ಡ್ ಪರ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಈದ್ಗಾ ಮೈದಾನದ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಆದೇಶ ಬೆನ್ನಲ್ಲೇ ದ್ವಿಸದಸ್ಯ ಪೀಠ ಅದರ ವಿರುದ್ಧವಾಗಿ ಆದೇಶ ನೀಡಿದೆ. ಚಾಮರಾಜಪೇಟೆ ಈದ್ಗಾ ಮೈದಾನ ವಕ್ಫ್​ ಬೋರ್ಡ್​ಗೆ ಸೇರಿದ ಆಸ್ತಿ ಎಂದು ಸಿಬಲ್ ವಾದ ಮಂಡಿಸಿದರು. ಮುಸ್ಲಿಂ ಸಮುದಾಯ ಈ ಮೈದಾನವನ್ನು ಪ್ರಾರ್ಥನೆಗೆ ಬಳಸುತ್ತಿದೆ. ವರ್ಷದಲ್ಲಿ ಎರಡು ಹಬ್ಬಗಳನ್ನು ಮೈದಾನದಲ್ಲಿ ಆಚರಿಸಲಾಗುತ್ತದೆ ಎಂದು ವಾದ ಮಂಡಿಸಿದರು. 

ಈದ್ಗಾ ಮೈದಾನದ ಮಾಲಕತ್ವ ಕುರಿತು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠ, ಗಣೇಶೋತ್ಸವ ಆಚರಣೆಗೆ ಶುಕ್ರವಾರ (ಆ.26) ಅನುಮತಿ ನೀಡಿತ್ತು. 

‘ಈ ವಿಚಾರವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಹಾಗೂ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಎದುರು ಮಂಡಳಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆಯನ್ನು  ಇಂದು (ಮಂಗಳವಾರ) ನಡೆಸಲು ಪೀಠವು ಒಪ್ಪಿಗೆ ನೀಡಿತ್ತು.

ಮೈದಾನದಲ್ಲಿ ಪೊಲೀಸ್ ಭದ್ರತೆ

ಸುಪ್ರೀಂ ಕೋರ್ಟ್ ವಿಚಾರಣೆ ಹಿನ್ನೆಲೆ ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
3 ಡಿಸಿಪಿ, 21 ಎಸಿಪಿ, 47 ಇನ್ಸ್​ಪೆಕ್ಟರ್​​ಗಳು, 130 ಪಿಎಸ್​ಐ, 126 ASI, 900 ಕಾನ್ಸ್‌ಟೇಬಲ್​ಗಳು, 120 RAF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೈದಾನದ ಭದ್ರತೆಗೆ ಒಟ್ಟು 1,500 ಪೊಲೀಸರು ನಿಯೋಜನೆಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News