×
Ad

ಶಿವಮೊಗ್ಗ: ಕೊಮ್ಮನಾಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

Update: 2022-08-30 16:42 IST

ಶಿವಮೊಗ್ಗ, ಆ.30: ತಾಲೂಕಿನ ಕೊಮ್ಮನಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲದಹಳ್ಳಿ-ಸೋಮಿನಕೊಪ್ಪ ಸುತ್ತಮುತ್ತಲಿನ ಭಾಗದ ಜನರಲ್ಲಿ ಭಯ, ಆತಂಕ ಹುಟ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಈ ಭಾಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಚಿರತೆ ರೈತರು ಹಾಗೂ ಗ್ರಾಮಸ್ಥರ ನಿದ್ರೆ ಕೆಡಿಸಿತ್ತು. ಚಿರತೆ ಕಳೆದ ಹಲವು ದಿನಗಳಿಂದ ಆಲದಹಳ್ಳಿ, ಸೋಮಿನಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿತ್ತು.

 ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿತ್ತು. ಚಿರತೆ ಸಂಚರಿಸುವ ಸ್ಥಳದಲ್ಲಿ ಬೋನನ್ನು ಕೂಡ ಇಡಲಾಗಿತ್ತು. ಕಳೆದ ಮೂರ್ನಾಲ್ಕು ತಿಂಗಳಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡ ಚಿರತೆ ಜಾನುವಾರು, ಕುರಿಗಳನ್ನು ತಿಂದಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಸೋಮವಾರ ರಾತ್ರಿ ಚಿರತೆ ಬಿದ್ದಿದೆ. ಚಿರತೆ ಸೆರೆ ಸಿಕ್ಕಿರುವುದು ಗ್ರಾಮಸ್ಥರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸೆರೆಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಂದ ಸ್ಥಳಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News