40 ವರ್ಷಗಳ ಹಿಂದಿನ ಪಠ್ಯವನ್ನಿಟ್ಟು ವಿವಾದ ಸೃಷ್ಟಿಸಿರುವುದು ಅಚ್ಚರಿ ತಂದಿದೆ: ಬರಗೂರು ರಾಮಚಂದ್ರಪ್ಪ

Update: 2022-08-30 14:54 GMT
ಬರಗೂರು ರಾಮಚಂದ್ರಪ್ಪ 

ಬೆಂಗಳೂರು, ಆ.30: 40 ವರ್ಷಗಳ ಹಿಂದಿನ ಪಠ್ಯ ‘ಭಾರತ ನಗರಿ’ ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುತ್ತಿರುವುದು ಅಚ್ಚರಿ ತಂದಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕಾದಂಬರಿಯನ್ನು ನಾನು 40 ವರ್ಷಗಳ ಹಿಂದೆ ಬರೆದಿದ್ದೆ. ಆಗ ದೇಶವನ್ನು ಕಾಂಗ್ರೆಸ್ ಪಕ್ಷ ಆಳುತ್ತಿತ್ತು. ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ, ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಕಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಚಲನಶೀಲತೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ’ದ ಲಯವನ್ನು ಬಳಸಿಕೊಳ್ಳುತ್ತಾನೆ ಎಂದರು.

ಅಲ್ಲದೆ, ಇದು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ. ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ. ಕೃತಿಕಾರನಾದ ನಾನು ಕಾದಂಬರಿಯ ಎಲ್ಲ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ ಎಂದು ಸ್ಪಷ್ಟನೆ ನೀಡಿದರು.

ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿವೆ. ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದೇನೆ. ಅದರಲ್ಲಿ ‘ಭರತ ನಗರಿ’ ಕಾದಂಬರಿಯೂ ಒಂದು. ರಾಷ್ಟ್ರ ಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದೇನೆ ಎಂದು ಹೇಳಿದರು. 

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ನಿರಾಕರಣೆ, ಯಥಾಸ್ಥಿತಿ ಕಾಪಾಡಲು ಸೂಚನೆ

------------------------------

ಆಕಸ್ಮಿಕವೊ, ಹುನ್ನಾರವೋ

ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ ನಗರಿಗೀತೆಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರ ಆಕಸ್ಮಿಕವೊ, ಹುನ್ನಾರವೋ ತಿಳಿಯದು.

-ಬರಗೂರು ರಾಮಚಂದ್ರಪ್ಪ, ಸಾಹಿತಿ

------------------------------------------

ದೂರು ನೀಡಿದ್ದ ಬಿಜೆಪಿ

ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ‘ಭರತ ನಗರಿ’ಯಲ್ಲಿ ರಾಷ್ಟ್ರಗೀತೆಯನ್ನು ಅವಹೇಳನ ಮಾಡಿದ್ದು, ಭಾರತವನ್ನು ‘ಜಡ ಭರತ’ ಎಂದು, ಗಂಗಾನದಿಯನ್ನು ‘ಹಾದರ’ ಎಂದು ಕರೆದಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿಯ ಕಾನೂನು ಪ್ರಕೋಷ್ಠ ಸೋಮವಾರ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News