ಸ್ಮಾರ್ಟ್ ಸಿಟಿ ಮಂಗಳೂರು ಒಂದೇ ಮಳೆಗೆ ಯಾಕೆ ಮುಳುಗಿ ಹೋಗುತ್ತಿದೆ?: ಸಿದ್ದರಾಮಯ್ಯ

Update: 2022-08-30 14:56 GMT

ಬೆಂಗಳೂರು, ಆ.30: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸ್ಮಾರ್ಟ್ ಸಿಟಿ ಎಂದ ಮಂಗಳೂರು (Mangaluru) ಯಾಕೆ ಒಂದೇ ಮಳೆಗೆ ಮುಳುಗಿ ಹೋಗುತ್ತಿದೆ? ಬೆಂಗಳೂರಿನ ರಸ್ತೆಗಳು, ಕಾಲುವೆಗಳು ಏನಾಗಿವೆ ಎಂದು ಜನರು ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿರೋಧ ಪಕ್ಷಗಳನ್ನು ಆಪರೇಷನ್ ಮಾಡುವ ಉದ್ದೇಶದಿಂದ ಪೆಗಾಸಸ್ ಗೂಢಾಚಾರಿಕೆ ಮಾಡಲಾಯಿತು. ಆದರೆ, ಈಗ ಕೇಂದ್ರ ಸರಕಾರ ಸಮಿತಿಗೆ ಸಹಕರಿಸಿಲ್ಲ ಎಂದು ವರದಿ ನೀಡಿದೆ. ಇದನ್ನು ನೋಡಿದರೆ ಕೇಂದ್ರ ದೇಶದಲ್ಲಿ ಹಿಟ್ಲರ್‍ಗಿರಿ ನಡೆಸುತ್ತಿದೆ ಎಂದು ಅರ್ಥವಾಗುತ್ತದೆ ಎಂದು ಅವರು ದೂರಿದ್ದಾರೆ. 

ಈ ಎಲ್ಲವನ್ನೂ ನೋಡಿದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡಲು ಹಣ ಕೊಟ್ಟು ಖರೀದಿಸಿ ರಚಿಸುತ್ತಿರುವ ಬಿಜೆಪಿ ಸರಕಾರಗಳಿಂದ ಈ ದೇಶದ ಜನರಿಗೆ ಯಾವ ನ್ಯಾಯವೂ ಸಿಗುವುದಿಲ್ಲ. ದೇಶದ ಯುವಜನರು ಉದ್ಯೋಗವಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ಅನಾಥರಾಗುತ್ತಾರೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೆ ಅಭಿವೃದ್ಧಿಯಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ. ತಲಾದಾಯದಲ್ಲಿ ಭಾರತಕ್ಕಿಂತ ಹಿಂದೆ ಇದ್ದ ಚೀನಾ ಇಂದು ಭಾರತಕ್ಕಿಂತ ಬಹಳ ಮುಂದೆ ಇದೆ. ಕಳೆದ ವರ್ಷದ ದಾಖಲೆಗಳಂತೆ ಭಾರತೀಯರ ತಲಾದಾಯ ಸುಮಾರು 1.5 ಲಕ್ಷ ರೂಪಾಯಿಗಳಿದ್ದರೆ. ಚೀನಾದವರ ತಲಾದಾಯವನ್ನು ರೂಪಾಯಿಗಳಿಗೆ ಪರಿವರ್ತಿಸಿದರೆ ಸುಮಾರು 10.5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಈಗ ಬಾಂಗ್ಲಾದ ಜನರ ತಲಾದಾಯ ಭಾರತೀಯರ ತಲಾದಾಯವನ್ನೂ ಮೀರಿ ಮುಂದಕ್ಕೆ ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ಮತ್ತು ಬಿಜೆಪಿಯವರು ದೇಶವನ್ನು ಬರ್ಬಾದು ಮಾಡಿಬಿಟ್ಟರು. ಈ ಬಾರಿ ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯನ್ನು ಕಿತ್ತೆಸೆದು ನೆಮ್ಮದಿಯ ನಾಳೆಗಳ ಕುರಿತು ಯೋಚಿಸಬೇಕು ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News