ಹಾಸನ | ದಲಿತ ವಿದ್ಯಾರ್ಥಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಪೊಲೀಸರ ಸಮ್ಮುಖದಲ್ಲಿ ಪ್ರವೇಶ

Update: 2022-08-30 16:53 GMT

ಹಾಸನ, ಆ.30: ದಲಿತ ವಿದ್ಯಾರ್ಥಿಯೋರ್ವನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಮಾಡಿದ ಘಟನೆ ದುದ್ದ ಹೋಬಳಿಯ ಹೆರಗು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

 ಎಂ.ಎ.ವಿದ್ಯಾರ್ಥಿ ಶರತ್ ರವಿವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಕ್ಕೆ ತೆರಳಿದ್ದಾಗ, ದೇವಸ್ಥಾನದ ಅರ್ಚಕ ಚಿಕ್ಕಣ್ಣ ಆಕ್ರೋಶ ವ್ಯಕ್ತಪಡಿಸಿ ದೇವಸ್ಥಾನದಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ದೇವಸ್ಥಾನ ಪ್ರವೇಶ ನಿರಾಕರಿಸಲಾದ ವಿದ್ಯಾರ್ಥಿ ಶರತ್ ಹಾಗೂ ಊರಿನ ಹಲವು ಜನ ದುದ್ದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಾಹಿತಿ ಪಡೆದ ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್ ಗ್ರಾಮಸ್ಥರಿಗೆ ತಿಳಿಹೇಳಿ ದೇವಾಲಯ ಪ್ರವೇಶ ಮಾಡಿಸಿ ಅರ್ಚಕನಿಂದಲೇ ಮಂಗಳಾರತಿ ಮಾಡಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ದೇವಸ್ಥಾನದ ಅರ್ಚಕ ಚಿಕ್ಕಣ್ಣ ಅವರ ವರ್ತನೆಯಿಂದ ಬೇಸರಗೊಂಡ ವಿದ್ಯಾರ್ಥಿ ಶರತ್ ಮತ್ತು ಗ್ರಾಮದ ದಲಿತ ಪ್ರಮುಖರು ಗ್ರಾಮದ ಮುಖಂಡ ವಾಸು ಎಂಬವರ ಬಳಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ:  ಮುರುಘಾ ಶರಣ ಬಂಧನಕ್ಕೆ ದಲಿತ ನಾಯಕರ ಆಗ್ರಹ; ರಾಜ್ಯಪಾಲರಿಗೆ ಮನವಿ

 ಗ್ರಾಮಸ್ಥರ ಮನವಿಯನ್ನು ಆಲಿಸಿದ ಜಿ.ಪಂ ಮಾಜಿ ಅಧ್ಯಕ್ಷ ಹೆರಗು ವಾಸು ಅವರು, ದೇವಸ್ಥಾನ ಮುಜರಾಯಿ ಇಲಾಖೆ ಒಳಪಡುವುದಿಲ್ಲ. ಇಷ್ಟು ದಿನ ದೇವಸ್ಥಾನ ಪ್ರವೇಶಿಸದ ನಿಮಗೆ ಇಂದು ದೇವಸ್ಥಾನ ಪ್ರವೇಶಿಸುವ ಅಗತ್ಯವಾದರೂ ಏನಿದೆ ಎಂದು ಗದರಿಸಿ ಕಳುಹಿಸಿದ್ದರಿಂದ ಹತಾಶೆಗೊಂಡ ದಲಿತ ಮುಖಂಡರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ಸಮ್ಮುಖದಲ್ಲಿ ಹೆರಗು ವಾಸು, ಗಂಡಸಿಗೌಡ, ದಲಿತರಾದ ಈರಯ್ಯ, ಅನೀಲ್, ದಿಲೀಪ್, ರಂಜನ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News