ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ
ಬೆಂಗಳೂರು, ಆ.30: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹು-ಧಾ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿ ಪಾಲಿಕೆಯ ಸದನ ಸಮಿತಿ ರಚನೆ ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮಾನ್ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ರಾತ್ರಿ 10 ಗಂಟೆಗೆ ನ್ಯಾ.ಅಶೋಕ್.ಎಸ್ ಕಿಣಗಿಯವರ ಕಚೇರಿಯಲ್ಲಿ ನಡೆದಿದೆ.
ವಾದ ವಿವಾದ ಆಲಿಸಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಸಮ್ಮತಿ ನೀಡಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸದನ ಸಮಿತಿಯು ಸೋಮವಾರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೂರು ದಿನ ಗಣೇಶ್ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಮೈದಾನದಲ್ಲಿ ಗಣೇಶ ಕೂರಿಸುವುದು ಈಗ ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಚಾರ ಎಂದಿದೆ.
► ಪೊಲೀಸ್ ಭದ್ರತೆ
ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದರ ಜೊತೆ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಈದ್ಗಾ ಆವರಣದ ಒಳಗೆ ಮತ್ತು ಈದ್ಗಾ ಆವರಣದ ಹೊರಗೆ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತೆಯನ್ನು ಒದಗಿಸಲಾಗಿದೆ. ಮೈದಾನದ ಸುತ್ತ ಪೊಲೀಸರು ಅಲರ್ಟ್ ಆಗಿದ್ದಾರೆ. ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಉತ್ಸವಕ್ಕೆ ಸದನ ಸಮಿತಿಯು ಅವಕಾಶ ನೀಡಿದೆ. ಹೈಕೋರ್ಟ್ ಆದೇಶದಂತೆ ಈಗ ಹು-ಧಾ ಪಾಲಿಕೆ ಆಯುಕ್ತರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.