ಬೆದರಿಕೆವೊಡ್ಡಿ ಹಣ ವಸೂಲಿ ಆರೋಪ : 6 ಮಂದಿ ನಕಲಿ ಪತ್ರಕರ್ತರ ಬಂಧನ

Update: 2022-08-31 10:14 GMT

ರಾಯಚೂರು, ಆ.31: ಬೆದರಿಕೆವೊಡ್ಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ 6 ಜನ ನಕಲಿ ಪತ್ರಕರ್ತರನ್ನು ಬಂಧಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.

ಬಂಧಿತರನ್ನು ರಾಜು ಬಿ, ನಾಗರಾಜ ಸಿ, ಪ್ರದೀಪ ಗೌಡ, ಅರ್ಪಿತಾ, ಮಹಾದೇವಿ, ಮೆಗಾ ಎಸ್ ಎಂದು ಗುರುತಿಸಲಾಗಿದ್ದು, ಬಂಧಿತರು ಯೂಟ್ಯೂಬ್ ಚಾನೆಲ್ ಹೆಸರಿನ ನಕಲಿ ಪತ್ರಕರ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಹೆಸರು ಹೇಳಿಕೊಂಡು ಸ್ಥಳೀಯ ಅಕ್ಕಿ ಮಾರಾಟಗಾರರಿಗೆ ಬಂಧಿತ ಆರೋಪಿಗಳು ಬ್ಲಾಕ್ ಮೇಲ್ ಮಾಡಿದ್ದರು. ಅಕ್ಕಿ ವ್ಯಾಪಾರಿ ವೀರೇಶ ಎಂಬುವರ ಅಂಗಡಿಗೆ ನುಗ್ಗಿದ್ದ ನಕಲಿ ಪತ್ರಕರ್ತರು ಕ್ಯಾಮರಾ ಮತ್ತು ಲೋಗೋ ಹಿಡಿದು ನೀವು ಅಕ್ರಮವಾಗಿ ಪಡಿತರ ಆಹಾರ ಧಾನ್ಯದ ಅಕ್ಕಿ ಮಾರಾಟ ಮಾಡುತಿದ್ದೀರಿ, ನಿಮ್ಮ‌ ಬಗ್ಗೆ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಬ್ಲಾಕ್ ಮೇಲ್ ಮಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ದೂರಿನ ಬಳಿಕ  ಸ್ಥಳಕ್ಕೆ ಧಾವಿಸಿದ ಮುದಗಲ್ ಠಾಣೆಯ ಪೊಲೀಸರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಿಂದ ಕ್ಯಾಮರಾ, ಐಡಿ ಕಾರ್ಡ್ ಹಾಗೂ ಮಾರುತಿ ಸ್ವಿಫ್ಟ್ ಕಾರ್‌ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News