ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲ: ಗ್ರಾಪಂ ಕಚೇರಿ ಎದುರೇ ಅಂತ್ಯ ಸಂಸ್ಕಾರ ನೆರವೇರಿಸಿ ಗ್ರಾಮಸ್ಥರ ಆಕ್ರೋಶ
Update: 2022-09-01 13:33 IST
ಚಾಮರಾಜನಗರ, ಸೆ.1: ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆಯೊಬ್ಬರು ಮೃತದೇಹದ ಅಂತ್ಯಸಂಸ್ಕಾರವನ್ನು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಂಬಳ್ಳಿ ಗ್ರಾಮದ ಚಂದ್ರಮ್ಮ(48) ಎಂಬ ಮಹಿಳೆ ಇಂದು ಮೃತಪಟ್ಟಿದ್ದಾರೆ. ಮಾಂಬಳ್ಳಿ ಗ್ರಾಮದಿಂದ ಸ್ಮಶಾನಕ್ಕೆ ತೆರಳಲು ಹೊನ್ನಹೊಳೆ ಎಂಬ ಕಾಲುವೆಯನ್ನು ದಾಟಿ ಹೋಗಬೇಕಿದೆ. ಆದರೆ ಸುವರ್ಣಾವತಿ ಜಲಾಶಯದ ಹೊರಹರಿವು ಹೆಚ್ಚಾಗಿರುವ ಕಾರಣ ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಲುವೆಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಇದೇ ಕಾರಣಕ್ಕೆ ಆಕ್ರೋಶಿತ ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲೇ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿ ಆಕ್ರೋಶ ಹೊರಹಾಕಿದ್ದಾರೆ.