ಮುರುಘಾ ಶ್ರೀ ಪ್ರಕರಣ: ತನಿಖೆಯನ್ನು ಎಸ್.ಐ.ಟಿ.ಗೆ ವಹಿಸಲು ಬಡಗಲಪುರ ನಾಗೇಂದ್ರ ಒತ್ತಾಯ

Update: 2022-09-01 12:12 GMT

ಮೈಸೂರು, ಸೆ.1: ಅತ್ಯಾಚಾರ ಪ್ರಕರಣದ ಗಂಭೀರ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿಚಾರಣೆ ನಡೆಸುವ ಮೊದಲೇ ರಾಜಕಾರಣಿಗಳು ಕ್ಲೀನ್ ಚಿಟ್ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ  ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಗಂಭೀರ ಪ್ರಕರಣ. ಸ್ಥಳೀಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನ ಇರುವ ಕಾರಣ ತನಿಖೆಯನ್ನು ಎಸ್.ಐ.ಟಿ.ಗೆ (SIT) ವಹಿಸಬೇಕು, ದೂರುದಾರರಿಗೆ ಯಾವುದೇ ರೀತಿಯ ಭಯ ಭೀತಿ ಇಲ್ಲದಂತೆ ಹೇಳಿಕೆ ನೀಡಲು ಭದ್ರತೆ ಮತ್ತು ಅವಕಾಶ ಕಲ್ಪಿಸಬೇಕು, ದೂರುದಾರ ಬಾಲಕಿಯರ ಆರೋಗ್ಯ ತಪಾಸಣೆ ನಡೆಸಿದಂತೆ ಆರೋಪಿಯ ಆರೋಗ್ಯ ತಪಾಸಣೆಯನ್ನು ಶೀಘ್ರದಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಿಎಂ ಬಿ.ಎಸ್.ಯೆಡಿಯೂರಪ್ಪ ಮತ್ತು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೇರಿದಂತೆ  ಹಲವು ರಾಜಕಾರಣಿಗಳು ಆರೋಪಿ ಮುರುಘಾ ಶರಣರ ವಿಚಾರಣೆಗೂ ಮುನ್ನ ಅವರ ಪರ ನಿಲ್ಲುವುದು ತಪ್ಪು, ರಾಜಕಾರಣಿಗಳು ಬಾಲ ಮುಚ್ಚಿಕೊಂಡಿರಬೇಕು ಎಂದು ಕಿಡಿಕಾರಿದರು.

ಇದೊಂದು ರಾಜಿರಹಿತ ಪ್ರಕರಣವಾಗಿದ್ದು, ಸಂದಾನಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂಬ ಮುರುಘಾ ಶರಣರ ಹೇಳಿಕೆ ತಪ್ಪು, ಹೊರ ರಾಜ್ಯದ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊತಬರುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಅತೀವೃಷ್ಟಿಯಿಂದ ಸಾವಿರಾರು ರೈತರ ಕೋಟ್ಯಂತರ ರೂ. ಮೌಲ್ಯದ ಬೆಳೆ, ಜಾನುವಾರು, ಮನೆಗಳು ಹಾಳಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಹಲವಾರು ಮಂತ್ರಿಗಳು ಅತೀವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿಲ್ಲ, ಸಂತ್ರಸ್ತರ ಪರಿಹಾತ ನೀಡುವುದಾಗಿ ಪತ್ರಿಕೆಗಳ ಘೋಷಣೆ ಮಾಡುತ್ತಿದ್ದಾರೆ ಹೊರತು ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಧಾನಿಯೋ ಅಥವಾ ಬೇರೆ ಯಾವ ದೇಶಕ್ಕೆ ಪ್ರಧಾನಿಯೋ ಅರ್ಥವಾಗುತ್ತಿಲ್ಲ, ಪಕ್ಷದ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಮಂಗಳೂರಿಗೆ ಬರುತ್ತಾರೆ. ಆದರೆ ಅತೀವೃಷ್ಟಿಯಿಂದ ಸಂಕಷ್ಟಕ್ಕೀಡಾದವರ ಕಷ್ಟ ಕೇಳಲು ಬಂದಿಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣಗೊಳಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಯುಕ್ತ ಕಿಸಾನ್ ಮೋರ್ಚಾದ ಹನ್ನೊಂದನೇ ಸುತ್ತಿನ ಮಾತುಕತೆಯಲ್ಲಿ ಲಿಖಿತ ರೂಪದಲ್ಲಿ ಹೇಳಿದ್ದರೂ, ಪಾರ್ಲಿಮೆಂಟ್ ನಲ್ಲಿ ಸದನ ಸಮಿತಿಯ ಮುಂದೆ ತಂದು ವಿದ್ಯುತ್ ಖಾಸಗೀಕರಣಗೊಳಿಸಲು ಮುಂದಾಗಿರುವುದು ನಾಚಿಕಗೇಡು. ಇವರು ಬಲವಂತವಾಗಿ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿದರೆ ಅದನ್ನು ಕಿತ್ತು ಬಿಸಾಕುತ್ತೇವೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಅಶ್ವತ್ಥನಾರಾಯಣ ರಾಜೇ ಅರಸ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News