ಕಾಂಗ್ರೆಸ್ ಸದಸ್ಯತ್ವಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ

Update: 2022-09-01 14:29 GMT

ಬೆಂಗಳೂರು, ಸೆ. 1: ‘2019ರ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಮಾಜಿ ಸಂಸದ ಹಾಗೂ ಹಿರಿಯ ಮುಖಂಡ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಗುರುವಾರ ದಿಢೀರ್ ಬೆಳವಣಿಗೆಯೊಂದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ‘ಶೀಘ್ರದಲ್ಲೇ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದೇನೆ' ಎಂದು ಘೋಷಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

‘ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿವೆ. ಹೀಗಾಗಿ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಸದ್ಯ ತಮಗೆ ಆಗಿರುವ ಅನ್ಯಾಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಅದಕ್ಕೆ ಪರಿಹಾರ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ನೀವು ಪಕ್ಷಕ್ಕೆ ಅಗತ್ಯ ಸಹಕಾರ ನೀಡಬೇಕು' ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಮುದ್ದಹನುಮೇಗೌಡರಿಗೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಚುನಾವಣೆಗೆ ಸ್ಪರ್ಧಿಸುವೆ: ‘2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು ಇನ್ನೂ ತೀರ್ಮಾನ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹಿಂದಿರುಗುವ ಮಾತೇ ಇಲ್ಲ. ಯಾವ ಮನವೊಲಿಕೆಯು ಸಾಧ್ಯವಿಲ್ಲ' ಎಂದು ಮುದ್ದಹನುಮೇಗೌಡ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ. ಪಕ್ಷ ಬಿಡಲು ಬಲವಾದ ಕಾರಣ ಅದು ಪಕ್ಷದಿಂದ ಆಗಿರಬೇಕು ಮತ್ತು ಇಲ್ಲ ನನ್ನಿಂದ ಆಗಿರಬೇಕು. ಅದು ನನ್ನಿಂದ ಆದರೆ, ಪಕ್ಷ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು' ಎಂದು ಮುದ್ದಹನುಮೇಗೌಡ ತಿಳಿಸಿದ್ದಾರೆ.

‘1989ರಲ್ಲಿ ಕಾಂಗ್ರೆಸ್ ‘ಬಿ' ಫಾರಂ ಕೊಟ್ಟು ನಂತರ ಬೇರೆಯವರಿಗೆ ನೀಡಿದರು. ನಂತರ 2019ರಲ್ಲಿ ಸಂಸದ ಆಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ಟಿದೆ. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೆ ಆದ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ' ಎಂದೂ ಮುದ್ದಹನುಮೇಗೌಡ ಹೇಳಿದರು.

--------------------------------------------------

‘ನಾನು ಪಕ್ಷ ತೊರೆಯುತ್ತೇನೆಂದು ತಿಳಿಸಿದ್ದೇನೆ. ಪಕ್ಷ ನಾಯಕರನ್ನು ಬೆಳೆಸಬೇಕು. ಆಗ ನಾಯಕರಿಗೆ ಪಕ್ಷವನ್ನು ಬೆಳೆಸಲು ಅವಕಾಶ ಆಗುತ್ತದೆ. ನಾನು ಎಂದೂ ಅಧಿಕಾರ ಕೇಳಲಿಲ್ಲ. ಕೇವಲ ಟಿಕೆಟ್ ಕೊಡಿ ಎಂದಷ್ಟೇ ಕೇಳಿದ್ದೇನೆ. ಆದರೂ ನಾಲ್ಕು ಬಾರಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. 2019ರಲ್ಲಿ ಟಿಕೆಟ್ ನೀಡದೆ ಇರಲು ಯಾವುದೇ ಕಾರಣ ಇರಲಿಲ್ಲ. ಮೋದಿ ಹವಾ ಇದ್ದರೂ ಅದರ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಆ ಕೆಲಸವನ್ನು ಪಕ್ಷದ ಮುಖಂಡರು ಮಾಡಿಲ್ಲ, ಹೀಗಾಗಿ ನನಗೆ ಬೇಸರವಾಗಿದೆ. ಮುಂದಿನ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ'

-ಮುದ್ದಹನುಮೇಗೌಡ ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News