ಮುರುಘಾ ಶ್ರೀ ವಿರುದ್ಧ ಪೊಕ್ಸೊ ಪ್ರಕರಣ: ಪಾರದರ್ಶಕ ವಿಚಾರಣೆಗೆ ಸಾಹಿತಿಗಳ ಒಕ್ಕೊರಲ ಆಗ್ರಹ

Update: 2022-09-01 16:03 GMT

ಬೆಂಗಳೂರು, ಸೆ.1: ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲೆಯ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮುರಘಾ ಶ್ರೀಗಳ ವಿರುದ್ಧದ ವಿಚಾರಣೆ ಪಾರದರ್ಶಕವಾಗಿರಲಿ, ಕ್ಷಿಪ್ರಗತಿಯಲ್ಲಿ ತನಿಖೆ ನಡೆಯಲಿ ಎಂದು ಡಾ.ಕೆ.ಮರುಳಸಿದ್ದಪ್ಪ ಸೇರಿ ಹಲವು ಸಾಹಿತಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.   

ಇದನ್ನೂ ಓದಿ:  ಮುರುಘಾ ಶ್ರೀ ವಿರುದ್ಧ ಪೊಕ್ಸೊ ಪ್ರಕರಣ: ಕೋರ್ಟ್ ನಿಗಾದಲ್ಲಿ ತನಿಖೆಗೆ ವಕೀಲರ ಒತ್ತಾಯ

ಅತ್ಯಾಚಾರ ಪ್ರಕರಣದ ಆರೋಪ ಕೇಳಿ ಬಂದ ಬಳಿಕ ಡಾ.ಶಿವಮೂರ್ತಿ ಶ್ರೀಗಳು ನೀಡಿದ ಹೇಳಿಕೆ ಅವರ ಘನತೆಯನ್ನು ಹೆಚ್ಚಿಸುವಂತಿರಲಿಲ್ಲ. ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಮಾತು, ಮಠದ ಶ್ರೀಗಳಿಂದ ನಿರೀಕ್ಷಿತ ಅಭಿಪ್ರಾಯವಲ್ಲ. ಅಲ್ಲದೆ, ಸರಕಾರ ಮತ್ತು ಪೊಲೀಸ್ ಇಲಾಖೆ ಸಹ ಬಡ ಹೆಣ್ಣುಮಕ್ಕಳ ಹಿತರಕ್ಷಣೆಯನ್ನು ಆದ್ಯತೆಯ ವಿಚಾರವಾಗಿ ನೋಡುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ರಾಜೇಂದ್ರ ಚೆನ್ನಿ, ಅಲ್ಲಮಪ್ರಭು ಬೆಟ್ಟದೂರು, ಡಾ.ಜೆ.ಎಸ್.ಪಾಟೀಲ, ಶಂಕರ ಹಲಗತ್ತಿ, ಕೆ.ನೀಲಾ ಹಾಗೂ ಡಾ.ಸಿದ್ದನಗೌಡ ಪಾಟೀಲ ಅವರು ಉಲ್ಲೇಖಿತ ಪತ್ರದಲ್ಲಿ ತಿಳಿಸಿದ್ದಾರೆ.

ಬಡ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು, ಅವರ ಆರೋಪ ಸುಳ್ಳಾಗಿದ್ದರೆ, ನ್ಯಾಯಸಮ್ಮತವಾಗಿ ಅದು ಗೊತ್ತಾಗಬೇಕು. ಕ್ಷಿಪ್ರವಾಗಿ ನ್ಯಾಯ ವಿತರಣೆಯಾಗುವುದು ಬಹುಮುಖ್ಯ. ಇಲ್ಲದಿದ್ದರೆ, ಕಾನೂನು ಸುವ್ಯವಸ್ಥೆಯ ಬಗೆಗೆ ಜನ ನಂಬಿಕೆ ಕಳೆದುಕೊಳ್ಳುವ ಸಂಭವವಿದೆ ಎಂದು ಡಾ.ಕೆ.ಮರುಳಸಿದ್ದಪ್ಪ ಸೇರಿ ಹಲವು ಸಾಹಿತಿಗಳು ಒಕ್ಕೊರಲಿನಿಂದ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News