PSI ನೇಮಕಾತಿ ಹಗರಣ: ಸಿಐಡಿಯಿಂದ ಮೂರನೇ ಆರೋಪಪಟ್ಟಿ ಸಲ್ಲಿಕೆ

Update: 2022-09-01 16:37 GMT

ಕಲಬುರಗಿ, ಸೆ.1: ಪಿಎಸ್ಸೈ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ ಕಲಬುರಗಿ ನಗರದ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಗುರುವಾರ 2060 ಪುಟಗಳ ಮೂರನೆ ಆರೋಪ ಪಟ್ಟಿ(ಚಾರ್ಜ್‍ಶೀಟ್) ಸಲ್ಲಿಸಿದೆ. 

545 ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಳೆದ ಜು.29ರಂದು 1,609 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಈಗ 2,060 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕಲಬುರಗಿ ನಗರದ ನೊಬೆಲ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂದಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಚಾರ್ಜ್ ಶೀಟ್‍ನಲ್ಲಿ 124 ಕಡತಗಳು, 104 ಜನರ ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಅಕ್ರಮ ಹಾಗೂ ಎಂಎಸ್ ಇರಾನಿ ಕಾಲೇಜಿನಲ್ಲಿ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಎರಡು ಚಾರ್ಜ್ ಶೀಟ್‍ಗಳನ್ನು ಸಲ್ಲಿಸಲಾಗಿದೆ. 

ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ಅವರ ಪತಿ ರಾಜೇಶ್ ಹಾಗರಗಿ, ಆರ್.ಡಿ. ಪಾಟೀಲ, ಮಂಜುನಾಥ ಮೇಳಕುಂದಿ, ಅಮಾನತುಗೊಂಡ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕೆಎಸ್‍ಆರ್‍ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ರೇವೂರ ಹಾಗೂ ಹಲವು ಅಭ್ಯರ್ಥಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News