×
Ad

ಶಿವಮೊಗ್ಗ: ಸೆ.3ರಂದು ವಿವಿಧ ಸಂಘಟನೆಗಳಿಂದ ‘ನಮ್ಮ ನಡಿಗೆ ಶಾಂತಿಯ ಕಡೆಗೆ' ಕಾಲ್ನಡಿಗೆ ಕಾರ್ಯಕ್ರಮ

Update: 2022-09-01 22:10 IST

ಶಿವಮೊಗ್ಗ, ಸೆ.01: ನಗರದ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಒಕ್ಕೂಟದ ವತಿಯಿಂದ ಸೆ. 3 ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಎಂಬ ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಥುರಾ ಪ್ಯಾರಡೈಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ‘ನಮ್ಮ ನಡಿಗೆ ಶಾಂತಿಯ ಕಡೆಗೆ’ವೇದಿಕೆಯ ಪ್ರಮುಖರಾದ ಡಾ. ಧನಂಜಯ ಸರ್ಜಿ ಮಾತನಾಡಿ, ಶಿವಮೊಗ್ಗ ಸುಸಂಸ್ಕೃತರ ತವರೂರಾಗಿದೆ. ಇಂತಹ ತವರೂರಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ. ಶಾಂತಿ ಬಯಸುವುದು, ಶಾಂತಿ ಸ್ಥಾಪಿಸುವುದು, ಪ್ರೀತಿ ಹಂಚುವುದು ಈ ರ್ಯಾಲಿಯ ಉದ್ದೇಶವಾಗಿದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗುರುಗಳು ಇದರ ಮುಂದಾಳತ್ವ ವಹಿಸಲಿದ್ದಾರೆ. ವಿದ್ಯಾರ್ಥಿಗಳು ಶಾಂತಿ ಸಾರುವ ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಸಾಗುವರು. ಇದೊಂದು ಅಪರೂಪದ ಮತ್ತು ಶಾಂತಿಯ ನಡಿಗೆಯಾಗಿದೆ' ಎಂದರು.

'ಓಪನ್ ಮೈಂಡ್ಸ್ ವರ್ಡ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಕುಮಾರ್ ಅವರು ಮಾತನಾಡಿ,  ಸೆ.3ರಂದು ಬೆಳಗ್ಗೆ 10 ಗಂಟೆಗೆ ನಗರದ ಮೂರು ಕಡೆಯಿಂದ ನಡಿಗೆ ಆರಂಭವಾಲಿದೆ. ಗೋಪಿ ವೃತ್ತ, ಬಸ್ ನಿಲ್ದಾಣ ಮತ್ತು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ನಡಿಗೆ ಆರಂಭವಾಗಿ ಸೈನ್ಸ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.60ಕ್ಕೂ ಹೆಚ್ಚು ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳು ಈ ನಡಿಗೆ ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತಿವೆ. ವಿವಿಧ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10 ಸಾವಿರ ಮಂದಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದರು.

'ಸೈನ್ಸ್ ಮೈದಾನದವರೆಗೆ ನಡಿಗೆ ಕಾರ್ಯಕ್ರಮ ನಡೆಯಲಿದೆ. ಮೂರು ಧರ್ಮಗಳ ಧರ್ಮಗುರುಗಳು ಈ ಕಾರ್ಯಕ್ರಮದಲ್ಲಿ ಶಾಂತಿಯ ಸಂದೇಶ ತಿಳಿಸಲಿದ್ದಾರೆ.ಬೆಕ್ಕಿನ ಕಲ್ಮಠದ ಶ್ರೀಗಳು, ಬಸವಕೇಂದ್ರದ ಶ್ರೀಗಳು, ಜಡೆಮಠದ ಶ್ರೀಗಳು, ಕ್ರೈಸ್ತ ಧರ್ಮಗುರುಗಳಾದ ಡಾ. ಫ್ರಾನ್ಸಿಸ್ ಸೆರಾವೋ, ಫಾ. ಸ್ಟ್ಯಾನಿ, ಡಾ. ಕ್ಲಿಫರ್ಡ್ ರೋಷನ್ ಪಿಂಟೋ ಮತ್ತು ಮುಸ್ಲಿಮ್ ಧರ್ಮ ಗುರುಗಳು ಕೂಡ ಭಾಗವಹಿಸಲಿದ್ದಾರೆ' ಎಂದರು.

ಕೆ.ಪಿ. ಶ್ರೀಪಾಲ್ ಮಾತನಾಡಿ, ಮಕ್ಕಳು, ಸ್ವಾಮೀಜಿ, ಫಾದರ್, ಮೌಲ್ವಿಗಳು ಶಾಂತಿ ನಡಿಗೆಯಲ್ಲಿ ಇರಲಿದ್ದಾರೆ. 200ಕ್ಕೂ ಹೆಚ್ಚು ಸ್ವಯಂ ಸೇವಕರು, ಮಹಿಳಾ ಸಂಘಟನೆಗಳ ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಈ ನಡಿಗೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಕೂಡ ಕೈಜೋಡಿಸಿ, ಬೆಂಬಲ ವ್ಯಕ್ತಪಡಿಸಿ ಭದ್ರತೆ ವ್ಯವಸ್ಥೆ ಕೂಡ ಮಾಡಲಿದೆ ಎಂದರು.

ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ನಮ್ಮ ನಡಿಗೆ ಶಾಂತಿಯ ಕಡೆಗೆ ಎನ್ನುವ ಈ ನಡಿಗೆ ಅತ್ಯಂತ ಮಹತ್ವದ್ದಾಗಿದೆ. ಶಿವಮೊಗ್ಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಎಲ್ಲರೂ ಪಣತೊಡೋಣ. ಒಡೆದ ಮನಸುಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡೋಣ ಎಂದರು.

ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಸಮಾಜವಾದದಿಂದ ಕೋಮುವಾದದ ಕಡೆಗೆ ಹೆಜ್ಜೆ ಹಾಕುತ್ತಿರುವುದು ದುರದೃಷ್ಟಕರ. ವೈಚಾರಿಕ ಹಿನ್ನೆಲೆಯ ಜಿಲ್ಲೆಗೆ ಕಳಂಕ ಅಂಟಿಕೊಂಡಿದೆ. ಸಹೋದರರಂತೆ ಶಾಂತಿಯ ಸಂದೇಶ ಸಾರೋಣ.

ಜನಶಕ್ತಿ ಸಂಘಟನೆಯ ಕೆ.ಎಲ್.ಅಶೋಕ್ ಮಾತನಾಡಿ, ಗೋಪಾಲಗೌಡರ ನೆಲೆಬೀಡು, ಸಾಹಿತಿಗಳು ವೈಚಾರಿಕ ಸಂದೇಶ ಸಾರಿದ್ದರು. ಸಹಬಾಳ್ವೆ ಸಹಜೀವನವೆ ಶಿವಮೊಗ್ಗದ ನೆಲದ ಗುಣ. ಅದನ್ನು ಉಳಿಸಿ, ಬೆಳೆಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತ ಕುಮಾರ್, ರೈತ ಸಂಘ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಪ್ರಮುಖರಾದ ಪುಷ್ಪಾ, ಅಫ್ತಾಬ್ ಪರ್ವೀಝ್,  ರೋಷನ್ ಪಿಂಟೋ, ಸುರೇಶ್ ಅರಸಾಳು, ಡಾ. ಭರತ್, ಹಾಲೇಶಪ್ಪ, ಕೃಷ್ಣಮೂರ್ತಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News