ಕಲಬುರಗಿಯಲ್ಲಿ ನಾಡ ಪಿಸ್ತೂಲ್ ವಶ; ನಾಲ್ವರು ಆರೋಪಿಗಳ ಬಂಧನ

Update: 2022-09-02 09:52 GMT
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್

ಕಲಬುರಗಿ: ಅಕ್ರಮವಾಗಿ ನಾಡಪಿಸ್ತೂಲ್ ಅನ್ನು ಹೊಂದಿದ್ದ ನಾಲ್ಕು ಜನರನ್ನು ಬಂಧಿಸಲಾಗಿದ್ದ ಬಂಧಿತರಿಂದ ನಾಲ್ಕು ನಾಡಪಿಸ್ತೂಲ್ ಹಾಗೂ 18 ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನಾಡಪಿಸ್ತೂಲ್ ಬಗ್ಗೆ ಅಫಝಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ನಾಡ ಪಿಸ್ತೂಲ್ ಮಾರಾಟ ಜಾಲ ಇನ್ನೂ ಜೀವಂತವಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ನಾಲ್ಕು ನಾಡ ಪಿಸ್ತೂಲ್ ಹಾಗೂ ಹದಿನೆಂಟು ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.  

ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ಭೀಮಣ್ಣ ಪೂಜಾರಿ,  ಸಿದ್ದಪ್ಪ ದಿಗ್ಗಾಂವಿ, ಜೇವರ್ಗಿ ತಾಲೂಕಿನ ಮಂದೇವಾಲ್ ಗ್ರಾಮದ ಸಲೀಂ ಶಿರಸಗಿ, ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಪರಸಯ್ಯ ಗುತ್ತೇದಾರ್ ಎನ್ನುವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಬಂಧಿತ ಆರೋಪಿಗಳು, ಮಧ್ಯಪ್ರದೆಶದಿಂದ 25 ಸಾವಿರ ರೂಪಾಯಿಗೆ ಒಂದರಂತೆ ನಾಡ ಪಿಸ್ತೂಲ್ ಗಳನ್ನು ತಂದು, ಕಲಬುರಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 80ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ.  ಇದರಲ್ಲಿ ಇನ್ನಷ್ಟು ಜನರಿದ್ದು ಅವರನ್ನೂ ಕೂಡ ಆದಷ್ಟು ಬೇಗ ಅರೆಸ್ಟ್ ಮಾಡ್ತಿವಿ ಎಂದರು. 

ಅಫಝಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ನಾಡ ಪಿಸ್ತೂಲ್ ಜಾಲ ಪತ್ತೆಗಾಗಿ ಅಫಝಲಪುರ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ ಕುಮಾರ, ಬಸವರಾಜ ಚಿತಕೋಟಿ, ಯಡ್ರಾಮಿ ಪೊಲೀಸ್ ಠಾಣೆ ಹಾಗೂ ರಾಜಶೇಖರ ಎಎಸ್ಐ ಅಫಝಲಪುರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮೂರು ತಂಡಗಳನ್ನು ರಚಿಸುವ ಮೂಲಕ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಈ ಕುರಿತು ಅಫಝಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದ ಎಸ್ಪಿ ಇಶಾ ಪಂಥ ಅವರು, ಅಕ್ರಮ ನಾಡ ಪಿಸ್ತೂಲ್ ಜಾಲ ಭೇದಿಸಿ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News