×
Ad

ಟ್ವಿಟರ್ ಖಾತೆ ನಿರ್ಬಂಧ | ಅಪಪ್ರಚಾರಕ್ಕಾಗಿ ದೇಶ ವಿರೋಧಿಗಳಿಂದ ಟ್ವಿಟರ್ ಬಳಕೆ: ಹೈಕೋರ್ಟ್ ಗೆ ಕೇಂದ್ರದಿಂದ ಅಫಿಡವಿಟ್

Update: 2022-09-02 18:47 IST

ಬೆಂಗಳೂರು, ಸೆ.2: ಮಾಹಿತ ತಂತ್ರಜ್ಞಾನ(ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು ಎಂಬ ನೋಟಿಸ್‌ಗಳನ್ನು ಪ್ರಶ್ನಿಸಿ ಟ್ವಿಟರ್ ಕಂಪೆನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಹೈಕೋರ್ಟ್ (High Court of Karnataka) ಗೆ ಆಕ್ಷೇಪಣೆ ಸಲ್ಲಿಸಿದೆ. ಭಾರತದ ವಿರುದ್ಧ ಅಪಪ್ರಚಾರ ಮಾಡಲು ದೇಶ ವಿರೋಧಿಗಳು ಟ್ವಿಟರ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರಕಾರವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ. 

ಟ್ವಿಟರ್ ಕಂಪೆನಿಯ ಬೆಂಗಳೂರಿನ ಪ್ರತಿನಿಧಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ಗುಂಪು ದೌರ್ಜನ್ಯ ನಿಯಂತ್ರಿಸುವ ಹಾಗೂ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ 1,400ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಸರಕಾರವು ಹೈಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಸಾಮಾಜಿಕ ಜಾಲತಾಣದ ವ್ಯವಸ್ಥೆಯನ್ನು ಜನರಿಗೆ ಕಲ್ಪಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಟ್ವಿಟರ್ ಸೇರಿ ಇತರೆ ಖಾತೆಗಳನ್ನು ನಿರ್ಬಂಧಿಸಿ ಆದೇಶಿಸುವ ಸರಕಾರದ ಅಧಿಕಾರವು ಸೀಮಿತ ವ್ಯಾಪ್ತಿ ಹೊಂದಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಸರಕಾರವು ತಿಳಿಸಿದೆ. 

ಟ್ವಿಟರ್‌ರನ್ನು ಬಳಸಿಕೊಂಡು ದೇಶ ವಿರೋಧಿ ಹಾಗೂ ವಿದೇಶದಲ್ಲಿ ಇರುವ ಶತ್ರುಗಳು ಭಾರತದ ವಿರೋಧಿ ಅಪಪ್ರಚಾರಕ್ಕೆ ಬಳಕೆ ಮಾಡುತ್ತಿವೆ. ದೇಶದ ಏಕತೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವುದು ಉತ್ತಮ ಎಂದು ಸರಕಾರವು ಹೇಳಿದೆ. ಕೇಂದ್ರ ಸರಕಾರ ಪದೇ ಪದೇ ಆದೇಶವನ್ನೂ ನೀಡಿದರೂ ಟ್ವಿಟರ್ ಆದೇಶವನ್ನು ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ನ್ಯಾಯಿಕ ರಕ್ಷಣೆ ಪಡೆಯಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಕೇಂದ್ರ ಸರಕಾರವು ಹೇಳಿದೆ. 

ಬೇರೆ ಜಾಲತಾಣಗಳ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ ಸೀಮಿತ ಪದದ ಮಿತಿ ಹೊಂದಿರುವ ಟ್ವಿಟರ್ ಮಾಧ್ಯಮವು ವ್ಯಾಪಕವಾಗಿ ತಪ್ಪುಗಳನ್ನು ಪ್ರಚುರಪಡಿಸುವ ಶಕ್ತಿ ಹೊಂದಿದೆ. ಕಾನೂನಿನ ಅನ್ವಯ ಟ್ವಿಟರ್ ಮಾಧ್ಯಮ ಕೃತಕ ವ್ಯಕ್ತಿಯಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನದ 19, 14 ಅಥವಾ 21ನೆ ವಿಧಿಯಡಿ ಹಕ್ಕು ಕ್ಲೇಮ್ ಮಾಡಲಾಗದು. ಟ್ವಿಟರ್ ಅರ್ಜಿಯು ನೇರವಾಗಿ ತನ್ನ ಉದ್ದೇಶವನ್ನು ಈಡೇರಿಸಲಾಗದಿದ್ದರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಪ್ರಮಾಣ ಪತ್ರದಲ್ಲಿ ಕೇಂದ್ರ ಸರಕಾರವು ತಿಳಿಸಿದೆ. 

ಇದನ್ನೂ ಓದಿ>>> ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಮಾಜಿ ಆಟಗಾರ ಕಲ್ಯಾಣ್‌ ಚೌಬೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಆಯ್ಕೆ 

ಏನಿದು ಪ್ರಕರಣ: ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆ-2000ದ ಸೆಕ್ಷನ್ 69 ಎ ಅಡಿಯಲ್ಲಿ 2021ರ ಫೆ.2ರಿಂದ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್ ನೀಡಿರುವ ಕೇಂದ್ರ ಸರಕಾರವು 1,400 ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಹಾಗೂ 175 ಟ್ವಿಟ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶಿಸಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದೆ, ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News