×
Ad

ಮಲೆ ಮಹದೇಶ್ವರ ಬೆಟ್ಟ: ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರ ನಿಷೇಧ

Update: 2022-09-03 10:44 IST

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ನಿಷೇಧಿಸಿ ಹಾಗೂ 6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು  ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳು, ಅಗ್ನಿಶಾಮಕ ವಾಹನ, ಅಂಬುಲೆನ್ಸ್ ವಾಹನ, ರಾಜ್ಯ ಹಾಗೂ ಹೊರರಾಜ್ಯದ ಸಾರ್ವಜನಿಕ ವಾಹನಗಳಾದ ಸರ್ಕಾರಿ, ಖಾಸಗಿ ಬಸ್‍ಗಳು, ಸರ್ಕಾರಿ ಇತರೆ ಎಲ್ಲಾ ರೀತಿಯ ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ನ ತೀರ್ಪಿನಂತೆ ಬೆಂಗಳೂರು–ಕೊಯಯತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (209) ಬರುವ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ದಿಂಬಂ ಘಾಟಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡ ಬಳಿಕ ರಾತ್ರಿ ಹೊತ್ತಿನಲ್ಲಿ ಸರಕು ಸಾಗಣೆ ವಾಹನಗಳು ಮಹದೇಶ್ವರ ಬೆಟ್ಟ–ಪಾಲಾರ್‌ ಮೂಲಕ ಸಾಗುವ ಅಂತರರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಮಹದೇಶ್ವರ ಬೆಟ್ಟದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿತ್ತು. ರಸ್ತೆಯು ಕಿರಿದಾಗಿರುವುದರಿಂದ ಹಲವು ಅಪಘಾತಗಳೂ ಸಂಭವಿಸಿದ್ದವು. ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೂ ತೊಂದರೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್ 115, ಕರ್ನಾಟಕ ಮೊಟಾರು ವಾಹನಗಳ ನಿಯಾಮಾವಳಿ-1989ರ ನಿಯಮ 221-ಎ(5)ರ ಹಾಗೂ ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆ 1960ರ ಸೆಕ್ಷನ್ 3ರ ಪ್ರಕಾರ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಹಾಗೂ 6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News