VIDEO -ಅಹವಾಲು ಹೇಳಿ ಕೊಳ್ಳಲು ಬಂದ ಮಹಿಳೆಗೆ ನಿಂದನೆ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಆಕ್ರೋಶ

Update: 2022-09-03 06:48 GMT

ಬೆಂಗಳೂರು: ಅಹವಾಲು ಹೇಳಿ ಕೊಳ್ಳಲು ಬಂದ ಮಹಿಳೆಯೊಬ್ಬರಿಗೆ ಶಾಸಕ ಅರವಿಂದ ಲಿಂಬಾವಳಿ ನಿಂದಿಸಿದ ವಿಡಿಯೊ ಒಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗಿದೆ. 

ಗುರುವಾರ  ನಲ್ಲೂರಹಳ್ಳಿಯ ವೈಟ್‌ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಹಿಂತಿರುಗುವ ವೇಳೆ ದಾಖಲೆ ಪತ್ರಗಳನ್ನು ತೋರಿಸಿ ಅಹವಾಲು ಹೇಳಿ ಕೊಳ್ಳಲು ಮಹಿಳೆಯೊಬ್ಬರು ಮುಂದಾಗಿದ್ದರೆ. ಈ ವೇಳೆ ಮಹಿಳೆಗೆ ನಿಂದಿಸಿ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಶಾಸಕರು ಯತ್ನಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

‘ಒತ್ತುವರಿ ಮಾಡಿಕೊಂಡು ನನಗೆ ನ್ಯಾಯ ಕೇಳಲು ಬರುತ್ತಿಯಾ, ಮಾನ ಮರ್ಯಾದೆ ಇಲ್ವ ನಿನಗೆ, ನನಗೂ ಬೇರೆ ಭಾಷೆ ಬರುತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು, ಏನ್ ಮಾತಾಡ್ತೀಯ ನೀನು?  ಒದ್ದು ಒಳಗೆ ಹಾಕಿ’ ಎಂದು ಅರವಿಂದ ಲಿಂಬಾವಳಿ ಅವರು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿರುವುದು ವೈರಲ್‌ ಆಗಿರುವ ವಿಡಿಯೊದಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಮಾಜಿ ಸಚಿವರೂ ಆಗಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

'ಅರವಿಂದ ಲಿಂಬಾವಳಿ ಅವರೇ, ಇದೇನಿದು? ಒಂದು ಹೆಣ್ಣಿನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ, ಅದೇತಕೆ ಇಷ್ಟು ದರ್ಪ?' ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಘಟಕ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News