ಜನರ ಕಷ್ಟ ಕೇಳುವ ತಾಳ್ಮೆ ಇಲ್ಲದಿದ್ದರೆ ಶಾಸಕರಾಗಿರಲು ಅರ್ಹರಲ್ಲ: ಡಿ.ಕೆ.ಶಿವಕುಮಾರ್

Update: 2022-09-03 12:05 GMT

ಬೆಂಗಳೂರು, ಸೆ.3: ಬೆಂಗಳೂರು ಹೊರವಲಯದ ಜನರು ತಮ್ಮ ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಅನಾಹುತ, ನಷ್ಟದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಯಾವುದೇ ಪಕ್ಷದವರಾಗಲಿ ಜನ ಆ ಕ್ಷೇತ್ರದ ಶಾಸಕರ ಬಳಿ ಹೋಗಿ ತಮಗಾಗಿರುವ ಅನ್ಯಾಯವನ್ನು ಕೇಳುತ್ತಾರೆ. ಮಹಿಳೆಯರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅದನ್ನು ಕೇಳದಿರುವುದು ಸಮಂಜಸವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನ ಅವರ ಸಮಸ್ಯೆ, ದುಃಖವನ್ನು ಹೇಳಿಕೊಂಡರು. ಜನರ ಕಷ್ಟ ಕೇಳುವ ತಾಳ್ಮೆ ಇಲ್ಲವಾದರೆ ಅವರು ಶಾಸಕರಾಗಿರಲು ಅರ್ಹರಲ್ಲ ಎಂದರು. 

ಉದ್ಯೋಗ ಸೃಷ್ಟಿ ಮೂಲಕ ಸರಕಾರಕ್ಕೆ ನೆರವು ನೀಡುತ್ತಿರುವ ಕಂಪನಿಗಳು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಹೊರವಲಯ ರಿಂಗ್ ರೋಡ್ ಕಂಪನಿಗಳ ಸಂಘದವರು ಸರಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಿದೆ ಎಂದು ಶಿವಕುಮಾರ್ ಹೇಳಿದರು.

ಕಷ್ಟ ಹೇಳಿಕೊಂಡ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಶಾಸಕರಾಗಿ ಮುಂದುವರಿಯಲು ಅರ್ಹರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಅರವಿಂದ ಲಿಂಬಾವಳಿ ಮಾತ್ರವಲ್ಲ ಇಡೀ ಸರಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ. ಇದು ಸರಕಾರದ ಎಲ್ಲರ ವೈಫಲ್ಯ ಎಂದು ಟೀಕಿಸಿದರು.

ಬೆಂಗಳೂರಿನ ಬ್ರ್ಯಾಂಡ್ ಹಾಳಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಈ ಸರಕಾರ ಹಾಳುಮಾಡಿದೆ. ಬೆಂಗಳೂರು ಸ್ಥಿತಿ ‘ಗೋವಿಂದಾ ಗೋವಿಂದಾ ಗೋವಿಂದಾ' ಎನ್ನುವಂತಾಗಿದೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ಹೊಸದಿಲ್ಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ರಾಹುಲ್ ಗಾಂಧಿ ಅವರು ಹಿರಿಯ ನಾಯಕರ ಸಭೆ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕ್ರಮ ಇರುವುದರಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಿಲ್ಲ. ಕೆಲವರನ್ನು ಮಾತ್ರ ಕರೆದುಕೊಂಡು ಹೋಗಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News