ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ನಮ್ಮದು ಸತ್ಯಕ್ಕೆ ಹತ್ತಿರವಾದ ಸಮೀಕ್ಷೆ: ಸಿ.ಟಿ.ರವಿ

Update: 2022-09-03 12:42 GMT

ದಾವಣಗೆರೆ: ​ವಿಧಾನಸಭೆ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯಾಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಮ್ಮ ಸಮೀಕ್ಷೆಯಲ್ಲೂ ಹೆಚ್ಚು ಸ್ಥಾನದೊಂದಿಗೆ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ನಮ್ಮದು ಸತ್ಯಕ್ಕೆ ಹತ್ತಿರವಾದಂತಹ ಸಮೀಕ್ಷೆ. ಕಾಂಗ್ರೆಸ್ಸಿನವರದ್ದು ಸತ್ಯಕ್ಕಿಂತಲೂ ದೂರವಾಗಿರುವಂತಹ ಸಮೀಕ್ಷೆಯಾಗಿದೆ ಎಂದರು.

ಸ್ವಲ್ಪ ನೀವೇ ಅವಲೋಕನ ಮಾಡಿರಿ. 2014ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ತಮ್ಮ ಅಪ್ಪನ ಆಣೆಗೂ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಲ್ಲವೆಂದು ಹೇಳಿದ್ದು ಇದೇ ಸಿದ್ದರಾಮಯ್ಯ. ಇದೇ ಸಿದ್ದರಾಮಯ್ಯನವರ ಅಪ್ಪನ ಆಣೆಗೂ ಎರಡು ಸಲ ಮೋದಿ ಪ್ರಧಾನ ಮಂತ್ರಿ ಆದರಲ್ಲವೇ?  ಎಂದು ಅವರು ಪ್ರಶ್ನಿಸಿದರು.

ಅಲ್ಲದೇ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರಲಿದೆ. ತಾವೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಾಗಿ ಇದೇ ಸಿದ್ದರಾಮಯ್ಯ ಹೇಳಿದ್ದರಲ್ಲವೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಾ? ಸಿದ್ದರಾಮಯ್ಯ ಮುಖ್ಯಮಂತ್ರಿ ಆದರಾ? ಇನ್ನು 2019ರ ಉಪ ಚುನಾವಣೆಗಳಲ್ಲಿ ಬಿಜೆಪಿ ಒಂದೇ ಒಂದು ಸೀಟು ಸಹ ಬರಲ್ಲ ಅಂದಿದ್ದರು. ನಾವು, ಜೆಡಿಎಸ್ ಒಟ್ಟಾಗಿದ್ದೇವೆ. ಎರಡು ಅಲ್ಲ, ಎಲ್ಡೂ ಪಾರ್ಟಿ ಒಟ್ಟು ಸೇರಿಸಿದರೆ, ಶೇ.65 ಮತ ಅಂದಿದ್ದು ಸಹ ಇದೇ ಸಿದ್ದರಾಮಯ್ಯ. ಆದರೆ ಎಷ್ಟು ಸೀಟು ಕಾಂಗ್ರೆಸ್-ಜೆಡಿಎಸ್ ಗೆದ್ದಿದ್ದು? ಒಂದೇ ಒಂದು ಸೀಟು ತಾನೇ ಎಂದು ಅವರು ಸಿದ್ದರಾಮಯ್ಯಗೆ ಕೆಣಕಿದರು.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಸ್ಪಷ್ಟವಾಗಿ, ಮುಂಚೆಯೇ ನಮ್ಮ ಸಮೀಕ್ಷೆಗಳ ಆದಾರದಲ್ಲಿ ಹೇಳಿದ್ದೆವು. ಅದರಂತೆ ಅಧಿಕಾರಕ್ಕೂ ಬಂದೆವು. ನಮ್ಮ ಪಕ್ಷಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಇರುವ ವ್ಯತ್ಯಾಸವೇ ಇದು. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನೂ ಹೆಚ್ಚು ಸಂಖ್ಯಾ ಬಲದೊಂದಿಗೆ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News