ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ನಮ್ಮದಾಗಲಿದೆ: ನಳಿನ್ ಕುಮಾರ್ ಕಟೀಲ್

Update: 2022-09-03 17:24 GMT

ಬೆಂಗಳೂರು, ಸೆ.3: ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಜನೋತ್ಸವ ನಡೆಯಲಿದೆ. ಅದು ಮುಂದಿನ ಚುನಾವಣೆಯ ದಿಕ್ಸೂಚಿ ಎನಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ದೊಡ್ಡಬಳ್ಳಾಪುರದಲ್ಲಿ ನಡೆಯುವ ಬೃಹತ್ ರ‍್ಯಾಲಿ ಅಂಗವಾಗಿ ಶುಕ್ರವಾರ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ನಡೆಯುವ ಸಮಾವೇಶದಲ್ಲಿ ಸಂದೇಶ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬರಲಿದ್ದಾರೆ ಎಂದು ಪ್ರಕಟಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದ ಎಲ್ಲ ಕಾರ್ಯಕರ್ತರಿಗೆ ಇದೊಂದು ಸಂತಸದ ವಿಚಾರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜನ ಸೇರಿಸಿ’ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೊಂದು ಸವಾಲಿನ ನಡುವೆ ಜನೋತ್ಸವ ನಡೆಯಲಿದೆ. ಅದು ಸಿದ್ದರಾಮಣ್ಣನ ಉತ್ಸವವಾದರೆ ಇದು ಜನರ ಪ್ರೇರಣೆಯಿಂದ ನಡೆಯುವ ಉತ್ಸವ ಎಂದು ಅವರು ವಿಶ್ಲೇಷಿಸಿದರು.

ಇಲ್ಲಿನ ಜನೋತ್ಸವದಿಂದ ಪ್ರಾರಂಭಿಸಿ 7 ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಲಾಗಿದೆ. ಸೆ.2ರಂದು ಪ್ರಧಾನಿ ಕಾರ್ಯಕ್ರಮವಿತ್ತು. ಅದು ಅಭೂತಪೂರ್ವವಾಗಿ ಯಶಸ್ವಿಯಾಗಿ ನಡೆದಿದೆ. 130 ಎಕರೆ ಜಾಗದಲ್ಲಿ ಪ್ರಧಾನಿ ಕಾರ್ಯಕ್ರಮ ನಡೆಯಿತು. ಕಡಿಮೆ ಅವಧಿ ಮತ್ತು ತಯಾರಿಯ ನಡುವೆ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಕಾರ್ಯಕ್ರಮ ನಡೆದಿದೆ. ಬೆಳಗ್ಗೆ 9 ಗಂಟೆಗೆ ಕುರ್ಚಿಗಳು ಭರ್ತಿ ಆಗಿದ್ದವು ಎಂದು ಅವರು ಹೇಳಿದರು.

ಮೋದಿಯವರ ಭಾಷಣ ಮುಗಿಯುವವರೆಗೆ ಕಾರ್ಯಕರ್ತರು, ಜನರು ಎದ್ದಿರಲಿಲ್ಲ. 20 ಗಂಟೆಗಳ ಕಾಲ ಅವರು ಬಿಜೆಪಿಗಾಗಿ ಸಮಯ ಮೀಸಲಿಟ್ಟರು. ಅದು ಜನರನ್ನು ಕರೆತಂದ ಸಭೆ ಅಲ್ಲ. ಕರೆತಂದಿದ್ದರೆ ಅವರು ಬಾರಿಗೋ, ಮದ್ಯದಂಗಡಿಗೋ, ಊಟ ಹುಡುಕಿಕೊಂಡೋ ಹೊರಗಡೆ ಇರುತ್ತಿದ್ದರು. ಅದು ಜನಪ್ರೇರಣೆಯ ಕಾರ್ಯಕ್ರಮವಾಗಿತ್ತು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ನಮ್ಮದಾಗಲಿದೆ. ಕಾರ್ಯಕರ್ತರನ್ನು ಸೇರಿಸಲು ಜೋಶ್ ಇರಬೇಕು. ಇಲ್ಲವಾದರೆ ಅದು ಸಿದ್ದರಾಮಣ್ಣನ ಕಾರ್ಯಕ್ರಮವಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:  ಒಂದು ದಿನ ಯುವ ಕ್ರೀಡಾಧಿಕಾರಿಯಾಗಲು ಯುವತಿಯರಿಗೆ ಅರ್ಜಿ ಆಹ್ವಾನ: ಸಚಿವ ನಾರಾಯಣ ಗೌಡ

ಫಲಾನುಭವಿಗಳಿಗೆ ನಮ್ಮ ಸರಕಾರದ ಬಗ್ಗೆ ಪ್ರೀತಿ ಇದೆ. ಅಭಿಮಾನವೂ ಇದೆ. ಅದನ್ನು ಬಳಸಿಕೊಳ್ಳಿ. ಸರಕಾರದ ಯೋಜನೆ, ಸಾಧನೆಯನ್ನು ತಿಳಿಸುವ ಕಾರ್ಯಕ್ರಮ ಜನೋತ್ಸವ ಎಂದ ಅವರು, ಇದು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ನುಡಿದರು.

ಸಭೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಸಂಸದ ಮುನಿಸ್ವಾಮಿ, ಶಾಸಕರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News