ಜೀವ ಬೆದರಿಕೆ ಆರೋಪ: ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಆನಂದ್ ಸಿಂಗ್

Update: 2022-09-03 17:38 GMT
 ಆನಂದ್ ಸಿಂಗ್ - ಪ್ರವಾಸೋದ್ಯಮ ಸಚಿವರು

ವಿಜಯನಗರ, ಸೆ. 3: ‘ನಾನು ಯಾವುದೇ ಅಪರಾಧವನ್ನೂ ಮಾಡಿಲ್ಲ. ನಾನು ಸರಕಾರ ಭೂಮಿ ಒತ್ತುವರಿ ಮಾಡಿದ್ದರೆ ಅದಕ್ಕೆ ದಾಖಲೆ ಕೊಡಲಿ. ಅದು ಬಿಟ್ಟು ರಾಜೀನಾಮೆ ಕೇಳುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನ ವಿರುದ್ಧ ಬೆದರಿಕೆ, ಜಾತಿ ನಿಂದನೆ ಆರೋಪ ಮಾಡಲಾಗಿದೆ. ಅದಕ್ಕೆ ದಾಖಲೆ ನೀಡಬೇಕು. ಈ ಕುರಿತು ನನ್ನೊಂದಿಗೆ ಸಿಎಂ ಮಾತನಾಡಿದ್ದು, ಅವರಿಗೆ ಸತ್ಯ ಸಂಗತಿಯನ್ನು ತಿಳಿಸಿದ್ದೇನೆ. ನನ್ನ ವಿರುದ್ಧ ಈವರೆಗಿನ ಎಲ್ಲ ಆರೋಪಗಳು ಕೇವಲ ಆರೋಪಗಳಷ್ಟೇ' ಎಂದು ವಿವರಣೆ ನೀಡಿದರು.

‘ಮಾಜಿ ಸಂಸದ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪನವರು ವಕೀಲರು. ಅವರು ಏನೇ ದಾಖಲೆ ಇದ್ದರೂ ಕೋರ್ಟ್‍ನಲ್ಲಿ ಮಾತನಾಡಬೇಕು. ದಾಖಲೆ ಇಲ್ಲದೆ ಆರೋಪ ಮಾಡಿದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ವಿರುದ್ಧದ ಆರೋಪಗಳ ಪಟ್ಟಿ ಹಿಡಿದುಕೊಂಡು ಪ್ರಧಾನಿ ಮೋದಿ, ಸಿಎಂ ಅವರನ್ನು ಉಲ್ಲೇಖಿಸಿದರೆ ನಾನು ಹೇಗೆ ಮಾತನಾಡಲು ಸಾಧ್ಯ' ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ರಜಪೂತ ಸಮುದಾಯಕ್ಕೆ ಸೇರಿದ್ದು, ನನ್ನ ಸಮಾಜ ಸಣ್ಣದು. ನಾವು ಅಲ್ಪಸಂಖ್ಯಾತ. ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಕಾನೂನಿನಲ್ಲಿ ಅವಕಾಶವಿದ್ದರೆ ನನ್ನನ್ನು ಬಂಧಿಸಬಹುದು ಎಂದು ನಾನೇ ಎಸ್ಪಿಗೆ ಹೇಳಿರುವೆ. ‘ಪೆಟ್ರೋಲ್ ಸುರಿದು ಸುಟ್ಟುಹಾಕುತ್ತೇನೆ’ ಎಂದು ಒಬ್ಬ ಸಾಮಾನ್ಯ ವ್ಯಕ್ತಿಯೂ ಮಾತಾಡುವುದಿಲ್ಲ' ಎಂದು ಆನಂದ್ ಸಿಂಗ್ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್, ಜೆಡಿಎಸ್‍ನ ಅನೇಕರು ಸರಕಾರಿ ಜಾಗಗಳಲ್ಲಿ ವಾಸಿಸುತ್ತಿದ್ದಾರೆ. ಆರೋಪ ಮಾಡುತ್ತಿರುವವರಿಗೆ ಅವರು ಕಾಣುತ್ತಿಲ್ಲ. ಬಳ್ಳಾರಿ ಅಖಂಡ ಜಿಲ್ಲೆಯಾಗಿದ್ದಾಗ ಉಗ್ರಪ್ಪನವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ಪಾರ್ಕ್ ಜಾಗದಲ್ಲಿ ನಮ್ಮವರೇ ಇದ್ದಾರೆಂದು ಹೇಳಿದ್ದರು. ಈಗ ಬೇರೆಯವರು ಬೆಂಕಿ ಹಚ್ಚಿದ ನಂತರ ಅದರ ಮೇಲೆ ಕಾಂಗ್ರೆಸ್ಸಿಗರು ರೊಟ್ಟಿ ಕಾಯಿಸಿಕೊಳ್ಳುತ್ತಿದ್ದಾರೆ' ಎಂದು ಅವರು ಟೀಕಿಸಿದರು.

‘ಭೂಗಳ್ಳರಿಂದ ನನ್ನ ಮೇಲೆ ದಾಳಿ ನಡೆಯುತ್ತಿದ್ದು, ನನ್ನ ವಿರುದ್ಧ ಠಾಣೆಗೆ ದೂರು ಕೊಟ್ಟಿರುವ ವ್ಯಕ್ತಿ ವಾಸವಿರುವ ಜಾಗ ಆತನಿಗೆ ಸೇರಿದ್ದಲ್ಲ. ಮಡಿವಾಳ ಸಮಾಜದ್ದು. ನನ್ನ ವಿರುದ್ಧ ದೂರು ಕೊಟ್ಟರೆ ಆ ಜಾಗಕ್ಕೆ ಆನಂದ್ ಸಿಂಗ್ ಕೈ ಹಾಕುವುದಿಲ್ಲ ಎಂದು ಹಾಗೆ ಮಾಡಿದ್ದಾರೆ' ಎಂದು ಆನಂದ್ ಸಿಂಗ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News