×
Ad

ಚಿತ್ರದುರ್ಗದ ಮುರುಘಾ ಶ್ರೀ ಬಂಧನ ಹಿನ್ನೆಲೆ: 'ಒಡನಾಡಿ' ಸಂಸ್ಥೆ ಮುಖ್ಯಸ್ಥರಿಗೆ ಬೆದರಿಕೆ ಕರೆ

Update: 2022-09-04 00:05 IST
ಡಾ.ಶಿವಮೂರ್ತಿ ಮುರುಘಾ ಶರಣರು | ಸ್ಟ್ಯಾನ್ಲಿ ಕೆ.ವಿ.

ಮೈಸೂರು,ಸೆ.3: ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳು ನೀಡಿದ ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಪೊಕ್ಸೋ ಪ್ರಕರಣ ದಾಖಲಾಗಿ ಬಂಧನವಾಗಿರುವ ಹಿನ್ನಲೆಯಲ್ಲಿ ಒಡನಾಡಿ ಸಂಸ್ಥೆಯ ಮುಖ್ಯಸ್ಥರುಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ನಮಗೆ ಮತ್ತು ಒಡನಾಡಿ ಸಂಸ್ಥೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಕೆ.ವಿ. ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

'ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎನ್ನಲಾದ ಪ್ರಮುಖ ಆರೋಪಿಯಾದ ಮುರುಘಾ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದು, ಈ ಹಿನ್ನಲೆಯಲ್ಲಿ ಮುರುಘಾ ಶ್ರೀಗಳ ಅನುಯಾಯಿಗಳು ಮತ್ತು ಮಠದ ಪರವಾಗಿರುವ ಕೆಲವು ಹಿತಾಸಕ್ತಿಗಳು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ, ಕೆ.ವಿ. ಹಾಗೂ ಪರಶುರಾಮ್ ಎಂ.ಎಲ್. ರವರಿಗೆ ಪ್ರಾಣ ಬೆದರಿಕೆಗಳನ್ನು ಒಡ್ಡುತ್ತಿರುವ ಮಾಹಿತಿಗಳು ಹಾಗೂ ಹಲವಾರು ಕರೆಗಳ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ'. 

'ಹಾಗಾಗಿ ಸಂಸ್ಥೆಯ ಮುಖ್ಯಸ್ಥರುಗಳಾದ ಸ್ಟ್ಯಾನ್ಲಿ ಕೆ.ವಿ. ಹಾಗೂ ಪರುಶರಾಮ್ ಎಂ.ಎಲ್. ಅವರಿಗೆ ಗನ್ ಮ್ಯಾನ್ ಹಾಗೂ ನಮ್ಮ ಕುಟುಂಬಗಳಿಗೂ ರಕ್ಷಣೆಯನ್ನು ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ. ಅಲ್ಲದೇ ಒಡನಾಡಿಯ ಮಡಿಲು ಸಂಸ್ಥೆಯು ಹೆಣ್ಣು ಮಕ್ಕಳ ಪುನರ್ ವಸತಿ ಕೇಂದ್ರವಾಗಿದ್ದು, ಹೆಣ್ಣು ಮಕ್ಕಳೇ ಇರುವ ಸಂಸ್ಥೆಯಾದ್ದರಿಂದ ಸಂಸ್ಥೆಯ ಎಲ್ಲಾ ಮಕ್ಕಳಿಗೂ ಸಿಬ್ಬಂದಿಗೂ ರಕ್ಷಣೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ಪೊಲೀಸ್ ರಕ್ಷಣೆಯ ವ್ಯವಸ್ಥೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು' ಎಂದು ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News