ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ | ಅನುಭವಿ ಕಾನೂನು ತಜ್ಞರ ನೇಮಕ: ಸಿಎಂ ಬೊಮ್ಮಾಯಿ

Update: 2022-09-04 13:46 GMT

ಹುಬ್ಬಳ್ಳಿ, ಸೆ. 4: ‘ಸುಪ್ರೀಂ ಕೋರ್ಟ್‍ನಲ್ಲಿ ನವೆಂಬರ್ 23ರಂದು ‘ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ' ವಿಷಯ ವಿಚಾರಣೆಗೆ ಬರಲಿದೆ.ರಾಜ್ಯದ ಪರವಾಗಿ ವಾದ ಮಂಡಿಸಲು ಅನುಭವಿ ಹಾಗೂ ಹಿರಿಯ ಕಾನೂನು ತಜ್ಞರ ತಂಡ ನೇಮಕ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ರವಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‘ಗಡಿವಿವಾದ ಕುರಿತು ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ಸಾಕಷ್ಟು ಅಧ್ಯಯನವನ್ನೂ ನಡೆಸಲಾಗಿದೆ. ವಾದ ಮಂಡನೆಗೆ ಹಿರಿಯ, ಅನುಭವಿ ವಕೀಲರನ್ನು ನೇಮಿಸಲು ಸೂಚಿಸಲಾಗಿದೆ' ಎಂದು ನುಡಿದರು.

ಮೇಲ್ಮನವಿ ಸಲ್ಲಿಸಲು ತೀರ್ಮಾನ: ‘ವೃತ್ತಿಶಿಕ್ಷಣ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶ  ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡಲಾಗಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಅವರು ಮಾಹಿತಿ ನೀಡಿದರು.

‘ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್‍ಕರ್ ವರದಿ ಅನುಷ್ಠಾನಗೊಳ್ಳುತ್ತಿದೆ. ಸಿಬ್ಬಂದಿಯೂ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಎಲ್ಲ ಇಲಾಖೆಯ ಸಿಬ್ಬಂದಿಗೂ ಇದು ಕಡ್ಡಾಯವಾಗಿದೆ' ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News