ಚಿಕ್ಕಮಗಳೂರು: ಒಕ್ಕಲೆಬ್ಬಿಸಲು ಮೇಲ್ವರ್ಗದ ಭೂ ಮಾಲಕರಿಂದ ಕಿರುಕುಳ; ಆರೋಪ

Update: 2022-09-04 14:56 GMT

ಚಿಕ್ಕಮಗಳೂರು, ಸೆ.4: ಮೇಲ್ವರ್ಗದ ಸವರ್ಣೀಯ ಪ್ರಭಾವಿ ವ್ಯಕ್ತಿಯೊಬ್ಬರು ದಲಿತರಿಗೆ ಸೇರಿದ ಜಮೀನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದಲ್ಲದೇ ಗ್ರಾಮ ಸಂಪರ್ಕದ ರಸ್ತೆಗೆ ಖಾಸಗಿ ರಸ್ತೆ ಎಂದು ನಾಮಫಲಕ ಹಾಕಿ ದಲಿತರಿಗೆ ತಿರುಗಾಡಲೂ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ  ಕಳಸ ತಾಲೂಕಿನ ಕಲ್ಲುಕುಡಿಗೆ ಗ್ರಾಮದ ದಲಿತರು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಶನಿವಾರ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ಮುಖಂಡರು, ಸಂತ್ರಸ್ತರು, ಕಳಸ ತಾಲೂಕು ವ್ಯಾಪ್ತಿಯ ತೋಟದೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ತಲಗೋಡು ಗ್ರಾಮ ಸಮೀಪದ ಕಲ್ಲುಕುಡಿಗೆ ಗ್ರಾಮದ ಸ.ನಂ.81ರಲ್ಲಿನ ಸರಕಾರಿ ಜಾಗದಲ್ಲಿ ರಾಘವ, ವಿದ್ಯಾನಂದ, ರಾಮಯ್ಯ ಎಂಬ ಮೂರು ದಲಿತ ಕುಟುಂಬಗಳು ಜಮೀನು ಹಾಗೂ ವಾಸದ ಮನೆಗಳನ್ನು ಹೊಂದಿದ್ದು, ಈ ಜಮೀನು ಹಾಗೂ ವಾಸದ ಮನೆಗಳಿಗೆ ಸರಕಾರದಿಂದ ಹಕ್ಕುಪತ್ರಗಳನ್ನೂ ನೀಡಲಾಗಿದೆ. ಆದರೆ ಗ್ರಾಮದ ಭೂಮಾಲಕರಾಗಿರುವ ಕೆ.ಸಿ.ನಾಗೇಶ್‍ಭಟ್, ಸುಬ್ರಹ್ಮಣ್ಯ ಭಟ್ ಎಂಬವರು ಸರ್ವೇ ಇಲಾಖೆಯ ವ್ಯಕ್ತಿಯೊಬ್ಬರನ್ನು ಕರೆ ತಂದು ದಲಿತರು ವಾಸವಾಗಿರುವ ಜಾಗವನ್ನು ದಬ್ಬಾಳಿಕೆ ಮೂಲಕ ಸರ್ವೆ ಮಾಡಿ ಜಾಗದ ಸರ್ವೆ ನಂಬರ್ ಅನ್ನು ಬದಲಾಯಿಸಿದ್ದಾರೆ. ಸದ್ಯ ಈ ದಲಿತ ಕುಟುಂಬಗಳಿಗೆ ಸೇರಿರುವ ಜಾಗ ಬೇರೆ ಸರ್ವೆ ನಂಬರ್ ನಲ್ಲಿದ್ದು, ಹಾಲಿ ಇರುವ ಜಾಗವನ್ನು ಖುಲ್ಲಾ ಮಾಡಬೇಕೆಂದು ಒಕ್ಕಲೆಬ್ಬಿಸಲು ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಮೇಲ್ವರ್ಗದವರ ಕಿರುಕುಳ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಂತ್ರಸ್ತರು ಇತ್ತೀಚೆಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು  ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ನ್ಯಾಯಕ್ಕೆ ಆಗ್ರಹಿಸಿದ್ದರು. ಆದರೆ ಯಾವ ಇಲಾಖಾಧಿಕಾರಿಗಳು ಈ ಸಂತ್ರಸ್ತರ ಸಮಸ್ಯೆ ಆಲಿಸಲು ಮುಂದಾಗಿಲ್ಲ. ಜಿಲ್ಲಾಡಳಿತ ದಲಿತರ ಮೇಲಿನ ದೌರ್ಜನ್ಯ, ಕಿರುಕುಳಕ್ಕೆ ಕಡಿವಾಣ ಹಾಕಬೇಕು ಹಾಗೂ ಸ್ಥಳ ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಪ್ರಗತಿಪರ ಸಂಘಟನೆಗಳ ಮುಖಂಡರಾದ ಗೌಸ್‍ಮೊಹಿದ್ದೀನ್, ದಲಿತ ಸಂಘಟನೆಗಳ ಮುಖಂಡರಾದ ಯಲಗುಡಿಗೆ ಹೊನ್ನಪ್ಪ, ವಸಂತ್‍ಕುಮಾರ್, ಗಣೇಶ್, ಉಮೇಶ್, ಮೋಹನ್ ಕಬ್ಬಿಗೆರೆ ಹಾಗೂ ಸಂತ್ರಸ್ತರಾದ ವಿದ್ಯಾನಂದ, ಗಣೇಶ್, ರಾಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News