ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ 85ರಿಂದ 90 ಕ್ಷೇತ್ರಗಳಲ್ಲಿ ಗೆಲುವು: ಕುಮಾರಸ್ವಾಮಿ ವಿಶ್ವಾಸ

Update: 2022-09-04 18:18 GMT

ಮಂಡ್ಯ, ಸೆ.4: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 85ರಿಂದ 90 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ತಾಲೂಕಿನ ಚಿಕ್ಕಜಕ್ಕನಹಳ್ಳಿ ಗ್ರಾಮದಲ್ಲಿ ಪಕ್ಷದ ಮುಖಂಡರೊಬ್ಬರ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸರಕಾರದ ಅಗತ್ಯವಿದೆ ಎಂದು ರಾಜ್ಯದಲ್ಲಿ ಜನತೆ ಚರ್ಚಿಸುತ್ತಿದ್ದಾರೆ ಎಂದರು.

ನಾವು ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‍ಗೆ ಮತ ಹಾಕದೆ ತಪ್ಪು ಮಾಡಿದ್ದೇವೆ. ಈ ಚುನಾವಣೆಯಲ್ಲಿ ಜೆಡಿಎಸ್ ಸರಕಾರ ತರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ದೇಶ ಮತ್ತು ರಾಜ್ಯದಲ್ಲಿ ಜನವಿರೋಧಿ ಸರಕಾರಗಳು ಅಧಿಕಾರ ನಡೆಸುತ್ತಿವೆ. ಜನರು ಸಂಕಷ್ಟಗಳನ್ನು ಸರಕಾರಗಳು ಕೇಳುತ್ತಿಲ್ಲ. ಹಾಗಾಗಿ ಜನಪರ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸರಕಾರ ಬರಲು ಜೆಡಿಎಸ್‍ಗೆ ಮತ ಹಾಕಬೇಕು ಎಂದು ಅವರು ಮನವಿ ಮಾಡಿದರು.

ಮೋದಿ ಗೊಂಬೆ ಕುಣಿಸಲು ಬರುತ್ತಾರ?: ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಏಕೆ ಬರುತ್ತಾರೆ? ಇಲ್ಲಿ ಗೊಂಬೆ ಕುಣಿಸಲು ಬರುತ್ತಾರ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕಳೆದ ಮೂರು ವರ್ಷದಲ್ಲಿ ಸುಮಾರು 30ರಿಂದ 40 ಸಾವಿರ ಕೋಟಿ ಬೆಳೆ ನಷ್ಟವಾಗಿದೆ.  ಮೂಲ ಸೌಕರ್ಯಕ್ಕೆ ಹಾನಿಯಾಗಿದೆ. ಕೇಂದ್ರ ಸರಕಾರ ಯಾವುದೇ ಅನುದಾನ ನೀಡಿಲ್ಲ.ಇನ್ನೇಕೆ ರಾಜ್ಯಕ್ಕೆ ಮೋದಿ ಪದೇ ಪದೇ ಭೇಟಿ ನೀಡುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರದಿಂದ ಯಾವುದೇ ನೆರವು ದೊರೆಯುತ್ತಿಲ್ಲ. ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ಏನು ನೆರವು ಕೊಟ್ಟಿದ್ದೀವಿ ಎಂದು ಬರುತ್ತಾರೆ? ಜನರ ಸಮಸ್ಯೆಗೆ ಏನು ಮಾಡಿದ್ದೇನೆಂದು ಬರುತ್ತಾರೆ? ಕೇವಲ ಭಾಷಣ ಬಿಗಿಯಲು ಬರುತ್ತಾರ? ಎಂದು ಅವರು ಕಿಡಿಕಾರಿದರು.
 
'ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ':

'ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ತೀರಾ ಕಳಪೆಯಿಂದ ಕೂಡಿದೆ. ಇತ್ತೀಚೆಗೆ ಸುರಿದ ಮಳೆಯ ಕಾಲಕ್ಕೆ ರಸ್ತೆ ಹಾಳಾಗಿ ಸಂಚಾರಕ್ಕೆ ತಡೆಯುಂಟಾಯಿತು. ಮುಂದಿನ ಐದು ದಿನ ಮಳೆ ಇರುವುದರಿಂದ ಬೆಂಗಳೂರು ಮೈಸೂರು ಮಾರ್ಗ ಸಂಚರಿಸುವ ವಾಹನಗಳು ಮಾಗಡಿ ಹಾಸನ ಮಾರ್ಗದಲ್ಲಿ ಸಂಚರಿಸಬೇಕೆಂದು ರಾಮನಗರ ಡಿಸಿ ಆದೇಶ ಹೊರಡಿಸಿರುವುದೇ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬುದಕ್ಕೆ ಸಾಕ್ಷಿಯಾಗಿದೆ' ಎಂದು ಅವರು ಪ್ರತಿಕ್ರಿಯಿಸಿದರು.

ಶಾಸಕ ಕೆ.ಸುರೇಶ್‍ಗೌಡ, ಮಹಾಲಿಂಗೇಗೌಡ ಮುದ್ದನಘಟ್ಟ ಸೇರಿದಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News