ಒಗ್ಗಟ್ಟಿನ ಕೊರತೆಯಿಂದ ರಾಜಕಾರಣ ದಲಿತರ ಕೈ ಜಾರುತ್ತಿದೆ: ಜಿ.ಪರಮೇಶ್ವರ್

Update: 2022-09-04 15:50 GMT

ಕೋಲಾರ: ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕರಾಗಿದ್ದರೂ, ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕಾರಣ ದಲಿತರ  ಕೈ ಜಾರುತ್ತಿದೆಯೆಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ವಿಷಾದಿಸಿದರು.

ನಗರದ ಗಲ್‌ಪೇಟೆಯಲ್ಲಿ ದಲಿತ ಸಮುದಾಯದ ಖಾಸಗಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಸನ್ಮಾನ ಸ್ಪೀಕರಿಸಿ ಮಾತನಾಡಿದ ಅವರು, ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ಒಗ್ಗಟ್ಟಾಗಿ ಮತ ಚಲಾಯಿಸಿದರೆ ರಾಜಕೀಯ ಕೀಲಿ ಕೈ ಹಿಡಿಯಲು ಸಾಧ್ಯವಾಗುತ್ತದೆ, ದಲಿತರು ಒಂದಾಗಬೇಕಿದೆ ಎಂದರು.

ಹಳ್ಳಿ ಮತ್ತು ಕೇರಿಗಳು ಒಂದಾಗುವವರೆವಿಗೂ ಸಮಾನತೆಯ ಹೋರಾಟ ಮುಂದುವರೆಸಬೇಕೆಂದು ಪ್ರತಿಪಾದಿಸಿದ ಅವರು, ಹಲವು ಹೋರಾಟಗಳಿಗೆ ನಾಂದಿ ಹಾಡಿರುವ ಕೋಲಾರ ಜಿಲ್ಲೆಯಿಂದಲೇ ಈ ಹೋರಾಟವನ್ನು ತಾವೇ ಮುಂದೆ ನಿಂತು ಮುನ್ನಡೆಸುವುದಾಗಿ ಘೋಷಿಸಿದರು.

ಕೋಲಾರದಲ್ಲಿ ತಮ್ಮ ತಂದೆ ಆರಂಭಿಸಿದ ಸಿದ್ದಾರ್ಥ ಪ್ರೌಢಶಾಲೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ತಾವು ಕೋಲಾರಕ್ಕೆ ಆಗಮಿಸಿದ್ದು, ಸಿದ್ದಾರ್ಥ ಪ್ರೌಢಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಅಮೃತಮಹೋತ್ಸವ ಭಾಷಣದಲ್ಲಿ ತಮಗೆ ಮಹಿಳೆಯರ ಮೇಲೆ ಗೌರವವಿದೆಯೆಂದು ಹೇಳಿದ ಮೋದಿಯವರು, ತಮ್ಮದೇ ಗುಜರಾತ್ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ನೆಪದಲ್ಲಿ ಬಿಡುಗಡೆ ಮಾಡಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದಾರೆ. ಇಂತವರಿಗೆ ಮಹಿಳೆ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಮೇಲೆ ಹೇಗೆ ಗೌರವ ಇರಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರು ಹಂಗಿನ ರಾಜಕಾರಣ ಮಾಡಬೇಕಾಗಿದೆ, ಸ್ವತಂತ್ರವಾಗಿ ಮಾತನಾಡುವ ಹಕ್ಕು  ಇಲ್ಲವಾಗಿದೆ, ಒಳ ಪಂಗಡಗಳ ಕಿತ್ತಾಡ ಬಿಟ್ಟು ಒಂದಾಗದಿದ್ದರೆ ಸ್ವಾಭಿಮಾನದ ರಾಜಕಾರಣ ಸಾಧ್ಯವಾಗುವುದಿಲ್ಲ, ಅಪಾಯದಲ್ಲಿರುವ ಸಂವಿಧಾನವನ್ನು ಸಂರಕ್ಷಿಸಲು ಸಾಧ್ಯವಿಲ್ಲವೆಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ದಲಿತ ಮುಖಂಡರು ಸಂಘಟನೆಗಳ ಪರವಾಗಿ ಜಿ.ಪರಮೇಶ್ವರ್‌ರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ನಜೀರ್ ಅಹಮದ್, ಮುಖಂಡರಾದ ಚಂದನಗೌಡ, ಮುನಿಆಂಜಿನಪ್ಪ, ಕೌನ್ಸಿಲರ್ ಶ್ರೀನಿವಾಸ್, ಶ್ರೀಕೃಷ್ಣ, ಎನ್.ಮುನಿಸ್ವಾಮಿ, ಗೊಲ್ಲಹಳ್ಳಿ ಶಿವಪ್ರಸಾದ್, ಲಕ್ಕೂರು ನಾರಾಯಣಸ್ವಾಮಿ, ಮಾಲೂರು ಲಕ್ಷ್ಮಿನಾರಾಯಣ (ಚಾಚಿ),  ಟಿ.ವಿಜಯಕುಮಾರ್, ಮು.ತಿಮ್ಮಯ್ಯ, ವಕ್ಕಲೇರಿ ರಾಜಪ್ಪ, ನಗರಸಭೆ ಸದಸ್ಯ ಅಂಬರೀಶ್, ಡಿಪಿಎಸ್ ಮುನಿರಾಜು, ಬಾಲಗೋವಿಂದ, ಕುಡುವನಹಳ್ಳಿ ಆನಂದ್,  ಬೆಳಗಾನಹಳ್ಳಿ ಮುನಿವೆಂಕಟಪ್ಪ , ಪಂಡಿತ್ ಮುನಿವೆಂಕಟಪ್ಪ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News