ಕುಮಾರಸ್ವಾಮಿ ಅವರ ಜಲಧಾರೆ ಕಾರ್ಯಕ್ರಮದಿಂದಲೇ ರಾಮನಗರಕ್ಕೆ ಹೆಚ್ಚು ಮಳೆ ಬಂದಿರಬೇಕು: ಸಿ.ಟಿ.ರವಿ ವ್ಯಂಗ್ಯ

Update: 2022-09-04 16:24 GMT

ಬೆಂಗಳೂರು, ಸೆ. 4: ‘ಕುಮಾರಸ್ವಾಮಿ ಜಲಧಾರೆ ಕಾರ್ಯಕ್ರಮದಿಂದ ರಾಜ್ಯದ ತುಂಬ ಮಳೆ ಆಗಿದೆ ಎಂದಿದ್ದಾರೆ. ಅವರಿಂದಲೇ ಮಳೆ ಆಗಿದ್ದರೆ ಅತಿವೃಷ್ಟಿಗೂ ಅವರೇ ಕಾರಣ ಇರಬೇಕಲ್ಲವೇ?, ರಾಮನಗರಕ್ಕೆ ಜಾಸ್ತಿ ಪ್ರೀತಿ ಇದ್ದ ಕಾರಣ ಹೆಚ್ಚು ಮಳೆ ಬಂದಿರಬೇಕು. ಅವರ ಹೇಳಿಕೆ ಸತ್ಯ ಎಂದು ಭಾವಿಸುವುದಿಲ್ಲ. ಇವರು ಜಲಧಾರೆ ಮಾಡಿದ್ದು ಕರ್ನಾಟಕದಲ್ಲಿ. ಆದರೆ, ದೇಶದ ತುಂಬೆಲ್ಲ ಮಳೆಯಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. 

ರವಿವಾರ ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಇದೆ ತಿಂಗಳ 17ಕ್ಕೆ ಪ್ರಧಾನಿ ಮೋದಿ ಜನ್ಮದಿನ. ಸೆ.25ಕ್ಕೆ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅಕ್ಟೋಬರ್ 2ಕ್ಕೆ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೆ.17ರಿಂದ ಅಕ್ಟೋಬರ್ 2ರ ವರೆಗೆ ಸೇವಾ ಪಾಕ್ಷಿಕವನ್ನು ಆಚರಿಸಲಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

‘ಸೆ.17ಕ್ಕೆ ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗುವುದು. ರಕ್ತದಾನಿಗಳ ವಿವರವನ್ನು ಪ್ರತಿ ಆಸ್ಪತ್ರೆಯಲ್ಲಿ ತಯಾರಿಸಿ ದಾನಿಗಳ ವಿವರ ಸಿಗುವಂತೆ ಮಾಡಲಾಗುವುದು. ಆರೋಗ್ಯ ಶಿಬಿರವನ್ನೂ ಆಯೋಜಿಸಲಾಗುವುದು. ಅಲ್ಲದೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಏರ್ಪಡಿಸಲಾಗುತ್ತದೆ ಎಂದು ಹೇಳಿದರು.

‘ಆಝಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ 75 ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣ ಆಗಿದೆ. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಸಸಿ ನೆಡಲಿದ್ದಾರೆ. 2025ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ಮೋದಿಯವರ ಸಂಕಲ್ಪ. ಅದಕ್ಕಾಗಿ ಪ್ರತಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು 5 ಜನ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆ, ಪೂರಕ ಬೆಂಬಲ ಕೊಡಲಿದ್ದಾರೆ' ಎಂದು ಮಾಹಿತಿ ನೀಡಿದರು.

‘ಅಲ್ಲದೆ, ಜನಸಂವಾದ, ಜನೋತ್ಸವ ಕಾರ್ಯಕ್ರಮಗಳನ್ನೂ ಆಯೋಜಿಸಲು ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ನಡೆಸಿ ಮರೆಮಾಚಿದ ಹಗರಣಗಳನ್ನೂ ಬಯಲಿಗೆ ಎಳೆಯಬೇಕು. ಆ ಹಗರಣಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ' ಎಂದು ಅವರು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಫಲಾನುಭವಿಗಳು ಪ್ರತಿ ಕ್ಷೇತ್ರದಲ್ಲಿ ಶೇ.65ರಿಂದ 80 ಪ್ರತಿಶತ ಜನರು ಇದ್ದಾರೆ. ಈ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸುವ ಕುರಿತು ಪ್ರಮುಖ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಿ, ಕಾರ್ಯಯೋಜನೆ ತಯಾರಿಸಲಾಗಿದೆ. ಕೆಂಪೇಗೌಡ ಕಟ್ಟಿದ ಬೆಂಗಳೂರಿನ ಹೆಸರನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಮೂಲಸೌಕರ್ಯ 3 ದಿನಗಳಲ್ಲಿ ಮಾಡುವುದೇ? ಅಥವಾ 3 ವರ್ಷದಲ್ಲಿ ಮಾಡುವುದೇ? ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಾಣ ನಡೆಸಿದ್ದು ಬಿಜೆಪಿ ಸರಕಾರ ಬಂದ ಮೇಲೋ ಅಥವಾ ಹತ್ತಿಪ್ಪತ್ತು ವರ್ಷದ ಹಿಂದಿನಿಂದಲೂ ರಾಜಕಾಲುವೆ ಒತ್ತುವರಿ ಪ್ರವೃತ್ತಿ ನಡೆದುಕೊಂಡು ಬಂದಿದೆಯೇ? ಕೆರೆಗಳನ್ನು ಮುಳುಗಿಸಿದ್ದು ಯಾರು? ಎಂದು ಕೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News