ಲೈಂಗಿಕ ಕಿರುಕುಳ ಪ್ರಕರಣ; ಮುರುಘಾ ಹಾಸ್ಟೆಲ್‍ನಿಂದ 37 ಬಾಲಕಿಯರ ಸ್ಥಳಾಂತರ

Update: 2022-09-05 03:07 GMT

ಚಿತ್ರದುರ್ಗ: ಮುರುಘಾ ಮಠದ ಶ್ರೀ ಶಿವಮೂರ್ತಿ ಸ್ವಾಮಿಯನ್ನು ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧಿಸಿದ ಹಿನ್ನೆಲೆಯಲ್ಲಿ ಎರಡು ಹಾಸ್ಟೆಲ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ 37 ವಿದ್ಯಾರ್ಥಿನಿಯರನ್ನು ಪಕ್ಕದ ಸರ್ಕಾರಿ ವಸತಿ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹಾಸ್ಟೆಲ್‍ನ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ ಬಳಿಕ ಪೋಕ್ಸೊ ಕಾಯ್ದೆಯಡಿ ಸ್ವಾಮೀಜಿ ಹಾಗೂ ಇತರ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸ್ವಾಮೀಜಿ ಹಾಗೂ ಹಾಸ್ಟೆಲ್ ವಾರ್ಡನ್‍ನನ್ನು ಬಂಧಿಸಲಾಗಿದ್ದು, ಇತರ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ಚಾಲನೆ ದೊರೆತ ತಕ್ಷಣ ಬಸವ ಹಾಗೂ ಅಕ್ಕಮಹಾದೇವಿ ಹಾಸ್ಟೆಲ್‍ಗಳಲ್ಲಿ ಓದುತ್ತಿದ್ದ 37 ಬಾಲಕಿಯರನ್ನು ಸರ್ಕಾರಿ ವಸತಿ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಆರಂಭದಲ್ಲಿ ಬಾಲಕಿಯರನ್ನು ಸರ್ಕಾರ ನಡೆಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ಆಯಾ ವಿದ್ಯಾರ್ಥಿನಿಯರ ಪೋಷಕರಿಗೆ ಹತ್ತಿರವಾಗುವ ವಸತಿ ಶಾಲೆಗಳಿಗೆ ವರ್ಗಾಯಿಸಲಾಗಿದೆ.

ಬಳ್ಳಾರಿ, ರಾಯಚೂರು, ಕೊಪ್ಪಳ, ತುಮಕೂರು, ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿನಿಯರು ವಿವಿಧ ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಹೊಂದಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದು, ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News