ಬಿಪಿಎಲ್ ಕಾರ್ಡ್‌ ಹೊಂದಿರುವ SC- STಗಳಿಗೆ ಉಚಿತ ವಿದ್ಯುತ್ ಯೋಜನೆ ಮುಂದುವರಿಸಲು ಸಿದ್ದರಾಮಯ್ಯ ಆಗ್ರಹ

Update: 2022-09-05 13:58 GMT

ಬೆಂಗಳೂರು, ಸೆ. 5: ‘ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಎಸ್ಸಿ-ಎಸ್ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಯೋಜನೆ ಮುಂದುವರೆಸಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ರಾಜ್ಯ ಸರಕಾರ ಕೃಷಿ ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆ ಕಡಿಮೆ ಮಾಡಿ ಮೀಟರ್ ಅಳವಡಿಸಲು ಹೊರಟಿರುವುದು ಮತ್ತು ಬಡತನ ರೇಖೆಗಿಂತ ಕೆಳಗಿರುವ ಎಸ್ಸಿ-ಎಸ್ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‍ವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ' ಎಂದು ಆಕ್ಷೇಪಿಸಿದ್ದಾರೆ.

‘ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಅರ್ಪಿಸುವ ಸಲುವಾಗಿ ಕೇಂದ್ರ ಸರಕಾರ ಕಾಯ್ದೆ ತಂದಿದೆ. ಈ ಕಾಯ್ದೆ ಜಾರಿ ಆಗುವ ಮೊದಲೇ ರಾಜ್ಯ ಸರಕಾರ ಪಂಪ್‍ಸೆಟ್‍ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ತನ್ನು ನಿಲ್ಲಿಸಿದೆ. ಹಾಗೆಯೇ, ಎಸ್ಸಿ-ಎಸ್ಟಿ ವರ್ಗದ ಏಳ್ಗೆಯ ಬಗ್ಗೆ ಪುಟಗಟ್ಟಲೆ ಜಾಹೀರಾತು ನೀಡಲಾಗಿತ್ತು. ಆದರೆ, ಬಡತನ ರೇಖೆಗಿಂತ ಕೆಳಗಿರುವ ಎಸ್ಸಿ-ಎಸ್ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‍ವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆ ನಿಲ್ಲಿಸಿರುವುದು ಅಕ್ಷಮ್ಯ' ಎಂದು ಟೀಕಿಸಿದ್ದಾರೆ.

‘ಈ ಮೂಲಕ ರೈತ ಮತ್ತು ದಲಿತ ಸಮುದಾಯಗಳ ವಿಚಾರದಲ್ಲಿ ಡಬ್ಬಲ್ ಎಂಜಿನ್ ಸರಕಾರ ಡಬ್ಬಲ್ ದ್ರೋಹ ಎಸಗಿದೆ. ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದೇ ಡಬ್ಬಲ್ ಎಂಜಿನ್ ಸರಕಾರದ ಸಾಧನೆ. ಪ್ರ್ರಧಾನಿ ಮೋದಿ ರಾಜ್ಯಕ್ಕೆ ಬಂದು ಜನೋದ್ಧಾರದ ಭಾಷಣ ಮಾಡಿ ಹೋದ ಬೆನ್ನಲ್ಲೇ ಸರಕಾರ ಈ ಎರಡು ಜನದ್ರೋಹದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿ ಭಾಷಣಗಳೆಲ್ಲಾ ಪೂರ್ತಿ ಬೋಗಸ್ ಎನ್ನುವುದನ್ನು ರಾಜ್ಯ ಸರಕಾರ ಒಪ್ಪಿಕೊಂಡಂತಾಗಿದೆ. ಇದಕ್ಕಿಂತ ದೊಡ್ಡ ಜನದ್ರೋಹ ಮತ್ತೊಂದು ಇರಲಾರದು' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ರೈತ ಸಮುದಾಯಕ್ಕೆ ಸರಕಾರ ನೀಡುವ ಯಾವ ಸವಲತ್ತುಗಳು ಮತ್ತು ರಿಯಾಯಿತಿ, ವಿನಾಯ್ತಿಗಳನ್ನೂ ಉಚಿತ ಎಂದು ಭಾವಿಸಲೇಬಾರದು. ಸರಕಾರವೇ ರೈತರ ಸಾಲಗಾರ’ ಎಂದು ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ ಪದೇ ಪದೇ ಹೇಳುತ್ತಿದ್ದರು. ನಾನೂ ಈ ಮಾತನ್ನು ಪೂರ್ತಿಯಾಗಿ ಸಮರ್ಥಿಸುತ್ತೇನೆ. ಹೀಗಾಗಿ ಈ ತಕ್ಷಣದಿಂದಲೇ ಸರಕಾರ ತನ್ನ ಜನದ್ರೋಹಿ, ರೈತ ವಿರೋಧಿ ಕೃತ್ಯವನ್ನು ನಿಲ್ಲಿಸಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಮೊದಲಿಗಿಂತ ಹೆಚ್ಚು ಸಮರ್ಪಕವಾಗಿ ಜಾರಿಗೊಳಿಸಬೇಕು.

‘ಇಲ್ಲದಿದ್ದರೆ ರೈತ ಸಮುದಾಯದ ಹೊಟ್ಟೆಯ ಸಿಟ್ಟು ನಿಮ್ಮನ್ನು ಸುಡುತ್ತದೆ. ಸೋರಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೃಹತ್ ಕಂಪೆನಿಗಳು ಉಳಿಸಿಕೊಂಡಿರುವ ದೊಡ್ಡ ಪ್ರಮಾಣದ ಬಾಕಿಯನ್ನು ವಸೂಲಿ ಮಾಡಬೇಕು. ಇಲಾಖೆಯ ಭ್ರಷ್ಟಾಚಾರವನ್ನು ಹದ್ದುಬಸ್ತಿಗೆ ತರುವ ಬಗ್ಗೆ ಗಮನ ಕೊಡಬೇಕಾದ ಸರಕಾರ ರೈತರು ಮತ್ತು ಎಸ್ಸಿ-ಎಸ್ಟಿ ಸಮುದಾಯವನ್ನು ತನ್ನ ಲೋಪಗಳಿಗೆ ಹೊಣೆ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಕ್ರಮ. ಕೂಡಲೇ ಇಂತಹ ಅನಾಗರಿಕ ಧೋರಣೆ ನಿಲ್ಲಿಸಿ ವಿದ್ಯುತ್ ಯೋಜನೆ ಮುಂದುವರೆಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ಮನೆಯಿಂದಲೇ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ: ಬೆಂಗಳೂರು ಸಂಚಾರ ಪೊಲೀಸರ ಮನವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News