×
Ad

ಬೆಂಗಳೂರಿನ ಮಳೆ ಅವಾಂತರಕ್ಕೆ ಸರ್ಕಾರದ ವೈಫಲ್ಯವೇ ಕಾರಣ: ಸಿದ್ದರಾಮಯ್ಯ ಅಕ್ರೋಶ

Update: 2022-09-05 20:14 IST

ಮೈಸೂರು,ಸೆ.5: ಬೆಂಗಳೂರಿನ ಮಳೆ ಅವಾಂತರಕ್ಕೆ ಸರ್ಕಾರದ ವೈಪಲ್ಯವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕೆರೆ, ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಇದರಿಂದ ಮನೆ, ರಸ್ತೆಗಳಿಗೆ ನೀರು ನುಗ್ಗುತ್ತಿದೆ.  ನಮ್ಮ ಸರ್ಕಾರ ಇದ್ದಾಗ,  ರಾಜಕಾಲುವೆ ಒತ್ತುವರಿ ತೆರವಿಗೆ ಚಾಲನೆ ಕೊಟ್ಟಿದ್ದೆವು.  ಬಿಜೆಪಿ ಅವರು ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾದರೂ ಏನು ಮಾಡಲಿಲ್ಲ.  ಐಟಿ, ಬಿಟಿ ಅವರಿಗೆ ಸರಿಯಾದ ಮೂಲಸೌಕರ್ಯ ಬೇಕು. ಈ ಸರ್ಕಾರದವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.  ಇದರಿಂದಾಗಿ ಐಟಿ, ಬಿಟಿ ಕಂಪನಿಗಳು ಬೇರೆಡೆ ಹೋಗುತ್ತಿದ್ದಾರೆ ಎಂದರು.

ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ, ಮಹಾಜನ್ ವರದಿಯೇ ಅಂತಿಮ. ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ.  ನ್ಯಾಯಾಂಗ ತೀರ್ಪು ಪುನರ್ ವಿಮರ್ಶೆಗೆ ಮಹಾರಾಷ್ಟ್ರದವರು ಕೇಳಿದ್ದಾರೆ. ನಮ್ಮ ಸರ್ಕಾರದವರೂ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್  ಚುನಾವಣೆ ವಿಚಾರವಾಗಿ ನನಗೆ ಗೊತ್ತಿಲ್ಲ. ಸ್ಥಳೀಯ ನಾಯಕರು ಯಾವ ತೀರ್ಮಾನ ಕೈಗೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಪಾಲಿಕೆ ಮೇಯರ್ ವಿಚಾರವನ್ನು ಅಲ್ಲಿ ಚರ್ಚೆ ಮಾಡ್ತೇನೆ. ಬಿಜೆಪಿ- ಜೆ.ಡಿ.ಎಸ್ ಮೈತ್ರಿ ವಿಚಾರ ನನಗೆ ಗೊತ್ತಿಲ್ಲ. ಅವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ ಎಂದು ಸಿದ್ಧರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News