×
Ad

KPTCL ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳ ಬಂಧನ

Update: 2022-09-05 21:15 IST

ಬೆಳಗಾವಿ, ಸೆ.5: ಸ್ಮಾರ್ಟ್‍ವಾಚ್ ಬಳಸಿ ಕೆಪಿಟಿಸಿಎಲ್ ಕಿರಿಯ ಸಹಾಯಕರ ಪರೀಕ್ಷೆ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದು, ಬಂಧನಕ್ಕೆ ಒಳಗಾದ ಆರೋಪಿಗಳ ಸಂಖ್ಯೆ 15ಕ್ಕೆ ಏರಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹನಗಂಡಿ ನಿವಾಸಿ ಬೀರಪ್ಪ ಲಕ್ಷ್ಮಣ ಹನಗಂಡಿ(24) ಹಾಗೂ ಗೋಕಾಕ ತಾಲೂಕಿನ ಅರಭಾವಿಯ ನಿವಾಸಿ ಶಿವಾನಂದ ದುಂಡಪ್ಪ ಹಳ್ಳೂರ ಬಂಧಿತರು. ಬಂಧಿತರಿಂದ ಅಕ್ರಮಕ್ಕೆ ಬಳಸಿದ 6 ಮೊಬೈಲ್ ಫೋನ್, ಲ್ಯಾಪ್‍ಟಾಪ್ ಹಾಗೂ ಎಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬೀರಪ್ಪ ಹನಗಂಡು ಎಂಬಾತ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕಾಗಿ ಲ್ಯಾಪ್‍ಟಾಪ್ ಹಾಗೂ ಸ್ಮಾರ್ಟ್‍ವಾಚ್ ಖರೀದಿಸಿ ಇನ್ನಿತರ ಆರೋಪಿಗಳಿಗೆ ತಂದು ಕೊಟ್ಟಿದ್ದನು. ಇನ್ನು ಶಿವಾನಂದ ಹಳ್ಳೂರ ಸ್ಮಾರ್ಟ್‍ವಾಚ್‍ಗಳಿಗೆ ಕನೆಕ್ಟ್ ಮಾಡುವ ಎಲೆಕ್ಟ್ರಾನಿಕ್ ಡಿವೈಸ್ ಸಮೇತ ಪರೀಕ್ಷೆಗೆ ಹಾಜರಾಗಿದ್ದ ಎನ್ನಲಾಗಿದೆ. ಬೀರಪ್ಪನಿಂದ ಲ್ಯಾಪ್‍ಟಾಪ್ ಹಾಗೂ ಒಂದು ಮೊಬೈಲ್‍ಫೋನ್ ಮತ್ತು ಶಿವಾನಂದ ಹಳ್ಳೂರನಿಂದ 5 ಮೊಬೈಲ್‍ ಫೋನ್ ಹಾಗೂ ಎಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರ ಜಾಮೀನು ಅರ್ಜಿ ವಜಾ

ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಬಂಧಿತರಾದ ಐವರ ಜಾಮೀನು ಅರ್ಜಿಯನ್ನು ಗೋಕಾಕದ 12ನೆ ಹೆಚ್ಚುವರಿ ಜಿಲ್ಲಾ ಕೋರ್ಟ್ ವಜಾಗೊಳಿಸಿದೆ. ಗೋಕಾಕ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿಯ ಸುನೀಲ ಅಜ್ಜಪ್ಪ ಭಂಗಿ, ಬೆಣಚಿನಮರಡಿಯ ಸಿದ್ಧಪ್ಪ ಕೆಂಚಪ್ಪ ಕೊತ್ತಲ, ವೀರನಗಡ್ಡಿಯ ಸಂತೋಷ ಪ್ರಕಾಶ ಮಾಣಗಾವಿ, ಮಾಲದಿನ್ನಿಯ ರೇಣುಕಾ ವಿಠಲ ಜವಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News